ಭಾರತದಲ್ಲಿ ಹೃದ್ರೋಗದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಜನರು ಹೆಚ್ಚಾಗಿ ಸ್ಪೈಸಿ ಆಹಾರವನ್ನು ಸೇವಿಸುತ್ತಾರೆ. ಹಾಗಾಗಿ ಇಂತಹವರು ಹೃದಯಾಘಾತ ಮತ್ತು ಎದೆಯುರಿಯ ನಡುವಿನ ವ್ಯತ್ಯಾಸವೇನು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತವವಾಗಿ ಇವೆರಡೂ ವಿಭಿನ್ನ ಸಮಸ್ಯೆಗಳಾಗಿದೆ. ಇವುಗಳ ಲಕ್ಷಣಗಳು ಸಹ ಬದಲಾಗುತ್ತಿರುತ್ತದೆ

ಹೃದಯಾಘಾತ: ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಅಡಚಣೆಯಾದಾಗ ಹೃದಯಾಘಾತ ಸಂಭವಿಸುತ್ತದೆ. ವಿಶ್ವ ಹೃದಯ ಸಂಘವು ಹೇಳುವಂತೆ, ಶೇ. 15 ರಷ್ಟು ಭಾರತೀಯರು ಒಂದಲ್ಲ ಒಂದು ರೂಪದಲ್ಲಿ ತಂಬಾಕು ಬಳಸುತ್ತಾರೆ, ಸರಾಸರಿ ವ್ಯಕ್ತಿ 4.3 ಲೀಟರ್ ಮದ್ಯ ಸೇವಿಸುತ್ತಾರೆ ಮತ್ತು ಶೇ. 21.1 ರಷ್ಟು ಭಾರತೀಯರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ. ಇದರಿಂದಾಗಿ ಭಾರತೀಯರು ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಒಳಗಾಗುವ ಅಪಾಯ ಹೆಚ್ಚು.
ಹೃದಯಾಘಾತವಾದಾಗ, ಒತ್ತಡ ಮತ್ತು ನೋವು ಎಡ ಭುಜ, ಗಂಟಲು ಅಥವಾ ಬೆನ್ನಿಗೆ ಹರಡಬಹುದು, ದೊಡ್ಡ ಆನೆ ನಮ್ಮ ಎದೆಯ ಮೇಲೆ ಕುಳಿತಿರುವಂತೆ ಅನಿಸಬಹುದು. ಇದರೊಂದಿಗೆ ಉಸಿರಾಟದ ಸಮಸ್ಯೆ, ಬೆವರು ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ಆದರೆ ಕೆಲವು ಸಾಮಾನ್ಯ ಮನೆಮದ್ದುಗಳನ್ನು ಪ್ರಯತ್ನಿಸಿದ ನಂತರವೂ ಈ ರೋಗಲಕ್ಷಣಗಳಲ್ಲಿ ಯಾವುದೇ ಸುಧಾರಣೆ ಕಾಣದಿದ್ದರೆ, ಇದು ಹೃದಯಾಘಾತದ ಸಂಕೇತವಾಗಿರಬಹುದು.
ಎದೆಯುರಿ: ಮತ್ತೊಂದೆಡೆ, ಹೊಟ್ಟೆಯ ಆಮ್ಲವು ಆಹಾರನಾಳಕ್ಕೆ ಮತ್ತೆ ಹರಿಯುವಾಗ ಎದೆಯುರಿ ಉಂಟಾಗುತ್ತದೆ. ವಿಶೇಷವಾಗಿ ನಾವು ಹೆಚ್ಚಾಗಿ ಮಸಾಲೆಯುಕ್ತ ಮತ್ತು ಉಪ್ಪುಸಹಿತ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆ ಆಗುತ್ತದೆ. ಇದು ಹುಳಿ ತೇಗನ್ನು ಉಂಟು ಮಾಡುತ್ತದೆ. ನೀವು ಆಗಾಗ್ಗೆ ಉಪ್ಪು, ಮಸಾಲೆಗಳು ಅಥವಾ ಮೆಣಸಿನ ಪುಡಿಯನ್ನು ತಿನ್ನುವುದರಿಂದ ಈ ರೀತಿ ಆಗಬಹುದು. ಆಂಟಾಸಿಡ್ ತೆಗೆದುಕೊಂಡ ನಂತರ ಈ ರೋಗಲಕ್ಷಣಗಳಲ್ಲಿ ನೀವು ಸುಧಾರಣೆಯನ್ನು ಕಾಣುತ್ತೀರಿ.
ಪ್ರಮುಖ ವ್ಯತ್ಯಾಸಗಳು: ಹೃದಯಾಘಾತ ಮತ್ತು ಎದೆಯುರಿಯ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಎದೆಯ ಪ್ರದೇಶವನ್ನು ಹೊರತು ಪಡಿಸಿ ಇತರ ಪ್ರದೇಶಗಳಿಗೆ ಹರಡುವ ನೋವು. ಎದೆಯುರಿ ಸಾಮಾನ್ಯವಾಗಿ ಊಟದ ನಂತರ ಸಂಭವಿಸುತ್ತದೆ. ವಿಶೇಷವಾಗಿ ನೀವು ಹೆಚ್ಚು ಊಟ ಅಥವಾ ಕೊಬ್ಬಿನಂಶ ಹೆಚ್ಚಿರುವ ಆಹಾರವನ್ನು ಸೇವಿಸಿದ ತಕ್ಷಣ ಎದೆಯುರಿ ಉಂಟಾಗುತ್ತದೆ. ಜೊತೆಗೆ ಹೃದಯಾಘಾತ ಯಾವುದೇ ಸಮಯದಲ್ಲಿ ಬೇಕಾದರೂ ಸಂಭವಿಸಬಹುದು ಮತ್ತು ಆಂಟಾಸಿಡ್ಗಳನ್ನು ತೆಗೆದುಕೊಳ್ಳುವುದರಿಂದಲೂ ನೋವು ಸುಧಾರಣೆ ಆಗುವುದಿಲ್ಲ.
ವೈದ್ಯಕೀಯ ಚಿಕಿತ್ಸೆ ಯಾವಾಗ ಪಡೆಯಬೇಕು: ನಿಮಗೆ ಎದೆ ನೋವು 15 ನಿಮಿಷಗಳಿಗಿಂತ ಹೆಚ್ಚು ಕಾಲ ಇದ್ದರೆ ಮತ್ತು ಉಸಿರಾಟದ ಸಮಸ್ಯೆ ಅಥವಾ ಮೂರ್ಛೆ ಹೋದರೆ, ಎದೆ ನೋವು ದೇಹದ ಇತರ ಭಾಗಗಳಿಗೆ ಹರಡಿದರೆ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕೂಡಲೇ ಹೋಗಬೇಕು.
ತಡೆಗಟ್ಟುವ ಕ್ರಮಗಳು: ಕಡಿಮೆ ಹುರಿದ ಆಹಾರಗಳು ಮತ್ತು ಹೆಚ್ಚು ತರಕಾರಿಗಳನ್ನು ಸೇವಿಸುವ ಮೂಲಕ ಸಮತೋಲಿತ ಆಹಾರವನ್ನು ಅನುಸರಿಸುವುದು ಮುಖ್ಯ. ಜೊತೆಗೆ ಚಹಾ, ಕಾಫಿ ಮತ್ತು ತಂಬಾಕಿನ ಅತಿಯಾದ ಸೇವನೆಯನ್ನು ತಪ್ಪಿಸಿ.
ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡಿ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಊಟವಾದ ತಕ್ಷಣ ಮಲಗಬೇಡಿ. ಹೆಚ್ಚು ಉಪ್ಪು ಮತ್ತು ಖಾರವಿರುವ ಆಹಾರವನ್ನು ಸೇವಿಸಬೇಡಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ)