ಅನೇಕ ಮಂದಿಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ತಲೆ ನೋವು ಸಹ ಒಂದಾಗಿದೆ. ತಲೆನೋವು ಎನ್ನುವುದು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಈಗಂತೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಆಗಿಬಿಟ್ಟಿದೆ. ಅದರಲ್ಲೂ ಅನೇಕ ಮಂದಿಗೆ ದಿನವೂ ಒತ್ತಡದಿಂದ ತಲೆ ನೋವು ಕಾಣಿಸಿಕೊಳ್ಳುತ್ತಿರುತ್ತದೆ, ಅದಕ್ಕಾಗಿ ಮಾತ್ರೆಗಳನ್ನು ಸಹ ತೆಗೆದುಕೊಳ್ಳುತ್ತಾರೆ.

ಸಾಮಾನ್ಯವಾಗಿ ತಲೆ ನೋವಿಗೆ ಕಾರಣಗಳೇನು ಅಂತ ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳಿವೆ. ಎಷ್ಟೋ ಬಾರಿ ವಿಪರೀತ ತಲೆನೋವು ಪಾರ್ಶ್ವವಾಯು, ಗೆಡ್ಡೆ, ರಕ್ತ ಹೆಪ್ಪುಗಟ್ಟುವಿಕೆ ಗಂಭೀರ ಸಮಸ್ಯೆಗಳಿಂದಲೂ ಉಂಟಾಗಬಹುದು. ಇನ್ನೂ ಕೆಲವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದಲೂ ತಲೆ ನೋವು ಉಂಟಾಗಬಹುದು.
ಅಧಿಕ ರಕ್ತದೊತ್ತಡದಿಂದ ಉಂಟಾಗುವ ತಲೆನೋವು ಸಾಮಾನ್ಯ ತಲೆನೋವಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇನ್ನೂ ಈ ಬಗ್ಗೆ ಡಾ. ಪಾಲ್ ರಾಬ್ಸನ್ ಅವರು ಕೆಲವೊಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದು, ಅವರ ಪ್ರಕಾರ ಈ ತಲೆನೋವು ಸಾಮಾನ್ಯವಾಗಿ ತಲೆಯ ಎರಡೂ ಬದಿಗಳಲ್ಲಿ ನೋವನ್ನು ಉಂಟು ಮಾಡುತ್ತದೆ. ಇದು ಸಾಮಾನ್ಯ ತಲೆನೋವಿಗಿಂತ ಹೆಚ್ಚು ತೊಂದರೆಯನ್ನು ನೀಡುತ್ತದೆ.
ಈ ತಲೆನೋವು ಸಾಮಾನ್ಯವಾಗಿ ಇದ್ದಕ್ಕಿದ್ದಂತೆ ಬರುತ್ತದೆ, ವಿಶೇಷವಾಗಿ ಬೆಳಗ್ಗೆ ಹೊತ್ತು ಈ ಸಮಸ್ಯೆ ಕಾಡುವುದು ಹೆಚ್ಚು. ತಲೆ ನೋವಿನ ತೀವ್ರತೆಯು ಸ್ವಲ್ಪ ಸಮಯದವರೆಗೆ ಕಡಿಮೆಯಾಗಬಹುದು, ಇಲ್ಲದಿದ್ದರೆ ಇದು ಸಂಪೂರ್ಣವಾಗಿ ಕಡಿಮೆಯಾಗದೇ ಸಹ ಇರಬಹುದು. ಕೆಲವು ವೇಳೆ ಈ ತಲೆನೋವು ತುಂಬಾ ತೀವ್ರವಾಗಿರಬಹುದು. ನೀವು ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ವಿಶೇಷವಾಗಿ ಗಂಟೆಗಟ್ಟಲೆ ಅಥವಾ ದಿನಗಳವರೆಗೆ ತಲೆನೋವು ಅನುಭವಿಸಬಹುದು.
ಈ ರೀತಿ ತಲೆನೋವಿನ ಜೊತೆಗೆ ತಲೆ ತಿರುಗುವಿಕೆ, ವಾಕರಿಕೆ, ದೃಷ್ಟಿ ಮಂದವಾಗುವುದು ಮತ್ತು ಮಾನಸಿಕ ಗೊಂದಲದಂತಹ ಸಮಸ್ಯೆಗಳನ್ನು ಸಹ ಎದುರಿಸುವ ಸಾಧ್ಯತೆಯಿದೆ. ಇವು ಅಧಿಕ ರಕ್ತದೊತ್ತಡ ಇರುವವರಲ್ಲಿ ಸಾಮಾನ್ಯವಾಗಿ ಕಂಡು ಬರುವ ಎಲ್ಲಾ ಲಕ್ಷಣಗಳಾಗಿವೆ.
ಮೂಗಿನಿಂದ ರಕ್ತಸ್ರಾವ, ಎದೆ ನೋವು, ಉಸಿರಾಟದ ಸಮಸ್ಯ ಮತ್ತು ದೇಹದ ಒಂದು ಭಾಗದಲ್ಲಿ ಕಾರ್ಯನಿರ್ವಹಣೆಯ ನಷ್ಟದಂತಹ ಲಕ್ಷಣಗಳು ತೀವ್ರ ಅಧಿಕ ರಕ್ತದೊತ್ತಡವನ್ನು ಸೂಚಿಸುತ್ತವೆ.
ಅಂತಹ ಗಂಭೀರ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಎಂದಿಗೂ ಈ ವಿಚಾರವಾಗಿ ವಿಳಂಬ ಮಾಡಬೇಡಿ. ಏಕೆಂದರೆ ಇದು ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ ಕಾರಣವಾಗಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ)