ಬೆಂಗಳೂರು: ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಇಂದಿನಿಂದ (ಮೇ 17) ರಾಜ್ಯದ 15 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಿಂಚು, ಗುಡುಗು ಹಾಗೂ ಸಿಡಿಲಿನಿಂದ ಈಗಾಗಲೇ 15 ಕ್ಕೂ ಜನ ಮೃತಪಟ್ಟಿದ್ದು, ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರಕಾರ, ಮುಂದಿನ ನಾಲ್ಕು ದಿನಗಳವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ವಿಶೇಷವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಇಂದಿನಿಂದ ಮೇ 21 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ತುಮಕೂರಿನಲ್ಲಿ ಇಂದು(ಶನಿವಾರ) ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ವಿಷೇಶವಾಗಿ ತಗ್ಗು ಪ್ರದೇಶಗಳು ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭಾರೀ ಮಳೆಯಿಂದಾಗಿ ಕೆಲವು ಸ್ಥಳಗಳಲ್ಲಿ ಸಂಚಾರ ವ್ಯತ್ಯಯ ಮತ್ತು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂದಿನ 7 ದಿನಗಳ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ, ರಾಜ್ಯದಾದ್ಯಂತ ಗುಡುಗು, ಮಿಂಚು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 40-50 ಕಿಮೀ ತಲುಪುವ ಸಾಧ್ಯತೆಯಿದೆ. ಮೇ 17 ರಿಂದ 20 ರವರೆಗೆ ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
