ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಚಂಡಮಾರುತ ‘ಫೆಂಗಲ್’ ಅಬ್ಬರ ಜೋರಾಗಿದ್ದು, ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ದಾಖಲಾಗುತ್ತಿದೆ. ಸೈಕ್ಲೋನ್ ಎಫೆಕ್ಟ್ ಮುಂದುವರಿಯುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಭಾರೀ ಮಳೆ ಇನ್ನೂ 3 ದಿನಗಳ ಕಾಲ ಮುಂದುವರಿಯಲಿದೆ. ಮೈಕೊರೆವ ಚಳಿ ಹಾಗೂ ಮಬ್ಬು ವಾತಾವರಣ ಕಂಡು ಇರಲಿದೆ. ಮುಖ್ಯವಾಗಿ ಇಂದು ಮಂಗಳವಾರ ಡಿಸೆಂಬರ್ 3ರಂದು ಸಾಧಾರಣದಿಂದ ಭಾರೀ ಮಳೆಯ ನಿರೀಕ್ಷೆ ಇದೆ.
ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಪ್ರಕಾರ, ನಗರದಲ್ಲಿ ಮುಂದಿನ ಕೆಲವೇ ಗಂಟೆಗಳಲ್ಲಿ ಅಥವಾ ಸಂಜೆ ಹೊತ್ತಿಗೆ ವಿಪರೀತ ಗಾಳಿ ಸಹಿತವಾಗಿ ಹಲವು ಪ್ರದೇಶದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಈ ಮೂಲಕ ಚಂಡಮಾರುತ ವೈಪರಿತ್ಯದ ಪ್ರಭಾವ ಬೆಂಗಳೂರಿನಲ್ಲಿ ಮುಂದುವರಿಯಲಿದೆ. ಮೂರು ದಿನಗಳ ನಂತರ ಅದರ ಪ್ರಭಾವ ಕುಂಠಿತಗೊಳ್ಳಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ನವೆಂಬರ್ 30ರಂದು ಶನಿವಾರ ಪುದುಚೇರಿ ಕರಾವಳಿಗೆ ಅಪ್ಪಳಿಸಿದ್ದ ಚಂಡಮಾರುತ ‘ಫೆಂಗಲ್’ ಸದ್ಯ ಮಂಗಳವಾರವು ಕೇರಳ ಹಾಗೂ ಅರಬ್ಬಿ ಸಮುದ್ರದ ದಿಕ್ಕಿನತ್ತ ವಿಸ್ತರಣೆಗೊಂಡಿದೆ. ಪರಿಣಾಮ ರಾಜ್ಯದ ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಾಗತೊಡಗಿದೆ. ಹೀಗಾಗಿ ಕರ್ನಾಟಕದ ಕೊಡಗು ಜಿಲ್ಲೆಗೆ ‘ರೆಡ್ ಅಲರ್ಟ್’ ನೀಡಿದ್ದು, ವಿವಿಧ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಇತ್ತ ಬೆಂಗಳೂರಿನಲ್ಲಿ ಸೋಮವಾರದಿಂದ ವ್ಯಾಪಕ ಚಳಿ ಹಾಗೂ ಮಳೆ ಆವರಿಸಿಕೊಂಡಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಂದು (ಡಿ.3) ಬೆಂಗಳೂರಿನ ವಿವಿಧ ಕಡೆಗಳಲ್ಲಿ ಚಳಿ ಗಾಳಿ ಸಮೇತ ಮಳೆ ಅಬ್ಬರಿಸಲಿದ್ದು, ಸಂಜೆ ಕಚೇರಿಗಳಿಂದ ಮನೆಗೆ ತೆರಳುವವರು ವ್ಯಾಪಾರಸ್ತರು, ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ. ಸದ್ಯದ ಮುನ್ಸೂಚನೆ ಪ್ರಕಾರ, ಈ ಮಳೆ ಇಂದು ಹೆಚ್ಚಿರಲಿದೆ. ನಾಳೆ ಬುಧವಾರ ಹಾಗೂ ಗುರುವಾವರೆಗೆ (ಡಿ.5ರವರೆಗೆ) ಮಳೆ ಮುಂದುವರೆದು ನಂತರ ಮಳೆ ಕಡಿಮೆ ಆಗುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.