ಬೆಳಗಾವಿ: ಮನುಷ್ಯ ಎಂದಮೇಲೆ ಎಡಭಾಗಕ್ಕೆ ಹೃದಯ, ಬಲ ಭಾಗಕ್ಕೆ ಲಿವರ್ ಇರೋದು ಸಹಜ ಆದರೇ ವೈದ್ಯಕೀಯ ಲೋಕವನ್ನೆ ಅಚ್ಚರಿಗೊಳಿಸುವ ಒಂದು ಸಂಗತಿ ಏನಪ್ಪ ಅಂದ್ರೆ ಅದು ಇಲ್ಲಿ ಒಬ್ಬ ಮಹಿಳೆಗೆ ಬಲಭಾಗಕ್ಕೆ ಹೃದಯ ಎಡ ಭಾಗಕ್ಕೆ ಲಿವರ್ ಇರೋದನ್ನು ಕಾಣಬಹುದು.. ಈ ವಿಶೇಷ ಮಹಿಳೆಯ ಕುರಿತು ತಿಳಿದು ಕೊಳ್ಳೋಣ ಬನ್ನಿ
ವಿಶ್ವ ಹೃದಯ ದಿನದಂದು ಈ ಅಚ್ಚರಿಯ ಬೆಳವಣಿಗೆಯನ್ನು ಕಂಡಿರುವುದು ನಿಜಕ್ಕೂ ಒಂದು ವಿಸ್ಮಯವಾದ ಸಂಗತಿ ಎನ್ನಬಹುದು. ಈಕೆಗೆ ಇರುವ ವಿಶೇಷತೆಗಳು ಅದ್ಬುತವಾದರು ಎಲ್ಲಾ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ನಿಜಕ್ಕೂ ವಿಸ್ಮಯವೇ ಅಲ್ಲವೇ..
ಹೌದು, ಬೆಳಗಾವಿ ಟಿಳಕವಾಡಿಯ ಸವಿತಾ ಸುನೀಲ ಚೌಗಲೆ(೫೦) ಅವರೇ ಇಂತಹ ವಿಭಿನ್ನ ದೇಹ ರಚನೆ ಹೊಂದಿರುವ ಅಪರೂಪದ ಮಹಿಳೆ. ಇವರು ಪತಿ ಸುನೀಲ್ ಹಾಗೂ ಮಗ ಸುಮಿತ್ ಜೊತೆಗೆ ಆರೋಗ್ಯಯುತವಾಗಿ ಸಹಜವಾಗಿ ಜೀವನ ನಡೆಸುತ್ತಿದ್ದಾರೆ. ಸವಿತಾ ಅವರ ದೇಹದಲ್ಲಿ ಅಪೆಂಡಿಕ್ಸ್ ಉದರದ ಕೆಳಭಾಗದ ಎಡಬದಿ, ಎಡಬದಿಯ ಶ್ವಾಸಕೋಶ ಬಲಬದಿಯಲ್ಲಿ, ಬಲಬದಿಯ ಶ್ವಾಸಕೋಶ ಎಡಬದಿಯಲ್ಲಿವೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ “ಸೈಟಸ್ ಇನ್ವರ್ಸಸ್” ಎಂದು ಕರೆಯಲಾಗುತ್ತದೆ.
೩೭ ವರ್ಷದ ಬಳಿಕ ಸತ್ಯ ಬಯಲು: ಸವಿತಾ ಅವರಿಗೆ ಈಗ ೫೦ ವರ್ಷ ವಯಸ್ಸು. ತಮ್ಮ ದೇಹರಚನೆ ರಹಸ್ಯ ಗೊತ್ತಾಗಿದ್ದು, ೧೩ ವರ್ಷಗಳ ಹಿಂದೆ. ಆಗ ಅವರಿಗೆ ೩೭ ವಯಸ್ಸು. ೨೦೧೧ರಲ್ಲಿ ಕಾರ್ಡಿಯಾಲಾಜಿಸ್ಟ್ ವೈದ್ಯರ ಬಳಿ ಆಗ ಸವಿತಾ ತಪಾಸಣೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಇಸಿಜಿ, ಎಕ್ಸ್ ರೇ ಮಾಡಿಸಿದಾಗ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಅಚ್ಚರಿಗೊಳಗಾದ ವೈದ್ಯರು ಪರೀಕ್ಷಿಸಿ ಇದನ್ನು ದೃಢಪಡಿಸಿದ್ದರು. ನಂತರ ಸವಿತಾ ಮತ್ತು ಅವರ ಪತಿಗೆ ವೈದ್ಯರು ಮನವರಿಕೆ ಮಾಡಿಕೊಟ್ಟು, ಧೈರ್ಯ ತುಂಬಿದ್ದರು.
ಈ ಅಪರೂಪದ ದೇಹರಚನೆಗೆ ‘ಜೆನೆಟಿಕ್’ ಕಾರಣ. ಆನುವಂಶಿಕ ಜೀವತಂತುಗಳಲ್ಲಿನ (ಜೀನ್ಸ್) ವ್ಯತ್ಯಾಸ ಭ್ರೂಣ ಬೆಳವಣಿಗೆ ಸಮಯದಲ್ಲಿ ಪರಿಣಾಮ ಬೀರುತ್ತದೆ. ಇಲ್ಲಿನ ಜೀವತಂತುಗಳ ಬದಲಾವಣೆಯಿಂದ (ಜೀನ್ ಮ್ಯುಟೇಶನ್) ಆಗುವ ವ್ಯತಿರಿಕ್ತ ಪರಿಣಾಮದಿಂದಾಗಿ ಅಂಗಾAಗಗಳ ಸ್ಥಾನ ಪಲ್ಲಟವಾಗಿದೆ. ಇದೊಂದು ಅಪರೂಪದ ಪ್ರಕರಣ. ಇದು ಒಂದು ರೋಗವೂ ಅಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಆದರೆ, ಈ ಬಗ್ಗೆ ಮೊದಲೇ ಯಾರಿಗಾದರೂ ಗೊತ್ತಿದ್ದರೆ ವೈದ್ಯರಿಗೆ ಮುಕ್ತವಾಗಿ ತಿಳಿಸಿದರೆ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತುಂಬಾ ಉಪಯುಕ್ತವಾಗಲಿದೆ ಎಂದು ಕೆಎಲ್ಇ ಶ್ರೀ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಮಹಾಂತೇಶ ರಾಮಣ್ಣವರ ವಿವರಿಸಿದರು.
ವೈದ್ಯಕೀಯ ಶಾಸ್ತ್ರದಲ್ಲಿ ಹೃದಯ ಬಲಭಾಗದಲ್ಲಿ ಇದ್ದರೆ “ಡೆಸ್ಟ್ರೋಕಾರ್ಡಿಯಾ” ಎನ್ನುತ್ತಾರೆ. ಇನ್ನು ಹೃದಯ ಬಲಭಾಗದಲ್ಲಿ ಇರುವ ಜೊತೆಗೆ ಬಲಭಾಗದಲ್ಲಿ ಇರುವ ಅಂಗಗಳಾದ ಲಿವರ್, ಕಿಡ್ನಿ, ಅಫೆಂಡಿಕ್ಸ್ ಎಡಭಾಗದಲ್ಲಿ ಇರುವುದಕ್ಕೆ ಸೈಟಸ್ ಇನ್ವರ್ಸಸ್ ಮಾನವ ಅಂಗರಚನೆಯ ಪ್ರತಿಬಿಂಬ) ಎಂದು ಕರೆಯಲಾಗುತ್ತದೆ. ಕನ್ನಡಿ ಮುಂದೆ ಓರ್ವ ಮನುಷ್ಯ ನಿಂತಾಗ ಯಾವ ರೀತಿ ವಿರುದ್ಧವಾಗಿ ಕಾಣಿಸುತ್ತದೆಯೋ ಅದೇ ರೀತಿ ಇದು ಕೂಡ ಎನ್ನುತ್ತಾರೆ ಡಾ. ಮಹಾಂತೇಶ ರಾಮಣ್ಣವರ.
ಈ ಬಗ್ಗೆ ಮಾತನಾಡಿದ ಸವಿತಾ, ಆರಂಭದಲ್ಲಿ ಸ್ವಲ್ಪ ಆತಂಕವಾಯಿತು. ಆದರೆ, ವೈದ್ಯರು ಧೈರ್ಯ ತುಂಬಿದರು. ಈಗ ನಾನು ಆರಾಮಾಗಿದ್ದೇನೆ. ಇನ್ನು ಡಾ. ಮಹಾಂತೇಶ ರಾಮಣ್ಣವರ ನಮಗೆ ಸಾಕಷ್ಟು ಮಾಹಿತಿ ನೀಡಿ, ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ನಾನು ಓರ್ವ ವಿಶಿಷ್ಟ ದೇಹರಚನೆ ಹೊಂದಿರುವ ಮಹಿಳೆ ಎನ್ನುವುದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು.