ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಯಶ್, ದೊಡ್ಡದೊಂದು ಪ್ರತಿಭಾವಂತ ತಂಡ ಕಟ್ಟಿಕೊಂಡು ಕೆಲ ವಾರಗಳ ಹಿಂದೆ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಸೆಟ್ ಹಾಕಿ ಸುಮಾರು ೩೦ ದಿನಗಳ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ. ನಯನತಾರಾ, ಬಾಲಿವುಡ್ ನಟ, ಹಾಲಿವುಡ್ ನಟರುಗಳು ಬೆಂಗಳೂರಿಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಯಶ್ ಜೊತೆಯಾಗಿ ಇಡೀ ತಂಡ ಮುಂಬೈಗೆ ಶಿಫ್ಟ್ ಆಗುತ್ತಿದೆ.
ನಟ ಯಶ್ ಹಾಗೂ ‘ಟಾಕ್ಸಿಕ್’ ಚಿತ್ರತಂಡ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿದ್ದು, ಇದೀಗ ಇಡೀ ಚಿತ್ರತಂಡ ಮುಂಬೈಗೆ ಶಿಫ್ಟ್ ಆಗುತ್ತಿದ್ದು, ಮುಂಬೈನಲ್ಲಿ ೪೫ ದಿನಗಳ ಕಾಲ ಸತತವಾಗಿ ಚಿತ್ರೀಕರಣ ನಡೆಸಲಿದೆ. ಕೆಲವು ವಿಎಫ್‌ಎಕ್ಸ್ ಭಾಗದ ಚಿತ್ರೀಕರಣ ಸೇರಿದಂತೆ ಆನ್ ಲೊಕೇಶನ್ ಚಿತ್ರೀಕರಣವೂ ಸಹ ಮುಂಬೈ ನಲ್ಲಿ ನಡೆಯಲಿದೆ. ಹೀಗಾಗಿ ಇಡೀ ಚಿತ್ರತಂಡ ಮುಂಬೈಗೆ ಶಿಫ್ಟ್ ಆಗುತ್ತಿದೆ.
ಮುಂಬೈನಲ್ಲಿ ಕೆಲವು ನಟ-ನಟಿಯರು ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಿಯಾರಾ ಅವರು ೪೫ ದಿನವೂ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಕಿಯಾರಾ ನಟಿಸಲಿರುವ ಎಲ್ಲ ದೃಶ್ಯಗಳ ಚಿತ್ರೀಕರಣವನ್ನು ಈ ೪೫ ದಿನಗಳಲ್ಲಿಯೇ ಪೂರ್ಣಗೊಳಿಸಲಿದೆ ಚಿತ್ರತಂಡ. ಯಶ್ ಸಹ ಲುಕ್ ಬದಲಾಯಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಿ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ನವರು ಬಂಡವಾಳ ತೊಡಗಿಸಿದ್ದಾರೆ. ಸುಮಾರು ೩೦೦ ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ಸಿನಿಮಾ ಚಿತ್ರೀಕರಣಗೊಳ್ಳುತ್ತಿದೆ. ಸಿನಿಮಾದಲ್ಲಿ ಯಶ್, ಕಿಯಾರಾ, ನಯನತಾರಾ, ಅಕ್ಷಯ್ ಒಬೆರಾಯ್, ವಿದೇಶಿ ನಟರಾದ ಬೆನಡಿಕ್ಟ್, ಕೈಲಿ ಪೌಲ್ ಇನ್ನಿತರರು ನಟಿಸುತ್ತಿದ್ದಾರೆ. ಕೆಲವು ವಿದೇಶಿ ತಂತ್ರಜ್ಞರು ಸಹ ಈ ಸಿನಿಮಾಕ್ಕೆ ಜೊತೆಯಾಗಿದ್ದಾರೆ.