ಹೊಸ ದಾಖಲೆ ಬರೆದ ಹೊಂಬಾಳೆಯ ‘ಮಹಾವತಾರ ನರಸಿಂಹ’

ಹೊಸ ದಾಖಲೆ ಬರೆದ ಹೊಂಬಾಳೆಯ ‘ಮಹಾವತಾರ ನರಸಿಂಹ’

 ‘ಕೆಜಿಎಫ್’, ‘ಕೆಜಿಎಫ್ 2’ ‘ಸಲಾರ್’ ಅಂಥಹಾ ಭಾರಿ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಮ್ಸ್  ಇತ್ತೀಚೆಗಷ್ಟೆ ಸಣ್ಣ ಬಜೆಟ್ನ ಸಿನಿಮಾ ಒಂದನ್ನು ಪ್ರಸ್ತುತಪಡಿಸಿತು. ಸಿನಿಮಾದ ಹೆಸರು ‘ಮಹಾವತಾರ ನರಸಿಂಹ’. ಅನಿಮೇಷನ್ ಸಿನಿಮಾ ಆಗಿದ್ದ ಇದನ್ನು ಹೊಂಬಾಳೆ ಪ್ರಸ್ತುತ ಪಡಿಸುವ ಜೊತೆಗೆ ದೇಶದಾದ್ಯಂತ ಬಿಡುಗಡೆ ಸಹ ಮಾಡಿತು. ಕೆಲವು ದೊಡ್ಡ ಸಿನಿಮಾಗಳ ಜೊತೆಗೆ ಬಿಡುಗಡೆ ಆದ ಈ ಸಿನಿಮಾ ‘ಕಿಂಗ್ಡಮ್’, ‘ಸು ಫ್ರಂ ಸೋ’, ‘ಎಕ್ಕ’, ‘ಜೂನಿಯರ್’,‘ಎಫ್1’, ‘ಜುರಾಸಿಕ್ ವರ್ಲ್ಡ್’ ಎಲ್ಲ ಸಿನಿಮಾಗಳೊಟ್ಟಿಗೆ ಹೋರಾಡಿ ಬಾಕ್ಸ್ ಆಫೀಸ್ನಲ್ಲಿ ಭಾರಿ ಜಯ ಗಳಿಸಿದೆ. ಅಷ್ಟು ಮಾತ್ರವೇ ಅಲ್ಲದೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

‘ಮಹಾವತಾರ ನರಸಿಂಹ’ ಸಿನಿಮಾದ ಶಕ್ತಿಯನ್ನು ಅರಿತ ಹೊಂಬಾಳೆ ಆ ಸಿನಿಮಾವನ್ನು ಪ್ರಸ್ತುತ ಪಡಿಸಿ, ಪ್ರಚಾರ ಮಾಡಿಸಿ, ಸಿನಿಮಾವನ್ನು ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳಗಳಲ್ಲಿ ಬಿಡುಗಡೆ ಮಾಡಿಸಿದ ಪರಿಣಾಮ ಇಂದು ಈ ಸಿನಿಮಾ 100 ಕೋಟಿ ಕ್ಲಬ್ ಸೇರಿಕೊಂಡಿದೆ! ಹೌದು, ‘ಮಹಾವತಾರ್ ನರಸಿಂಹ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಭಾರತೀಯ ಅನಿಮೇಷನ್ ಸಿನಿಮಾ ಒಂದು ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಬಾಚಿರುವುದು ಇದೇ ಮೊದಲು. ಭಾರತದಲ್ಲಿ ಹಾಲಿವುಡ್ನ ಅನಿಮೇಷನ್ ಸಿನಿಮಾಗಳು ಸಹ 100 ಕೋಟಿ ಬಾಚಿರಲಿಲ್ಲ.

‘ಮಹಾವತಾರ್ ನರಸಿಂಹ’ ಸಿನಿಮಾದ ನಿರ್ಮಾಣ ವೆಚ್ಚ ಒಂದು ಕೋಟಿಗೂ ಕಡಿಮೆ. ಕೆಲ ಮೂಲಗಳ ಪ್ರಕಾರ ಸಿನಿಮಾದ ನಿರ್ಮಾಣಕ್ಕೆ ಖರ್ಚಾಗಿರುವದು ಕೇವಲ 80 ಲಕ್ಷ ರೂಪಾಯಿಗಳು. ಆದರೆ ಸಿನಿಮಾದ ಪ್ರಚಾರ, ಬಿಡುಗಡೆ ಇನ್ನಿತರೆಗಳಿಗೆ ತುಸು ಹೆಚ್ಚು ಹಣ ಖರ್ಚು ಮಾಡಲಾಗಿದ್ದು, ಅದೆಲ್ಲದರ ಕಾರಣಕ್ಕೆ ಸಿನಿಮಾದ ಬಜೆಟ್ ಹೆಚ್ಚಿ 4 ಕೋಟಿ ವರೆಗೂ ತಲುಪಿದೆಯಂತೆ. ನಾಲ್ಕು ಕೋಟಿ ಬಜೆಟ್ನ ಈ ಸಿನಿಮಾ ಈಗ 100 ಕೋಟಿ ಗಳಿಸಿದೆ. ಅಲ್ಲಿಗೆ ಸುಮಾರು 25 ಪಟ್ಟು ಲಾಭವನ್ನು ಈ ಸಿನಿಮಾ ಮಾಡಿದೆ.

ಕೆಲ ವಾರಗಳ ಹಿಂದೆ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ಅನಿಮೇಷನ್ನ ಗುಣಮಟ್ಟದ ಬಗ್ಗೆ ವಿಮರ್ಶೆಗಳು ವ್ಯಕ್ತವಾಗಿದ್ದವು. ಚೋಟಾ ಭೀಮ್ಗಿಂತಲೂ ಕಳಪೆಯಾದ ಅನಿಮೇಷನ್ ಗುಣಮಟ್ಟವನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಆದರೆ ಕತೆ ಮತ್ತು ನಿರೂಪಣಾ ಶೈಲಿಯ ಕಾರಣಕ್ಕೆ ಸಿನಿಮಾ ಇದೀಗ ದೊಡ್ಡ ಯಶಸ್ಸು ಗಳಿಸಿದೆ. ವಿಶೇಷವಾಗಿ ಮಕ್ಕಳಿಗೆ ಈ ಸಿನಿಮಾ ಬಲುವಾಗಿ ಇಷ್ಟವಾಗಿದೆ. ಸಿನಿಮಾದ ಯಶಸ್ಸಿನ ಬಳಿಕ ಮಾತನಾಡಿರುವ ನಿರ್ದೇಶಕ ಅಶ್ವಿಕ್ ಕುಮಾರ್ ಮತ್ತು ನಿರ್ಮಾಪಕರಾದ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಮುಂದಿನ ಸಿನಿಮಾಗಳಲ್ಲಿ ಗುಣಮಟ್ಟದ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದಿದ್ದಾರೆ.

‘ಮಹಾವತಾರ್ ಯೂನಿವರ್ಸ್’

“ಮಹಾವತಾರ್ ನರಸಿಂಹ” ಸಿನಿಮಾ ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಬರಲಿರುವ ಸಿನಿಮಾ ಆಗಿರಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ‘ಮಹಾವತಾರ್’ ಯೂನಿವರ್ಸ್ನ ಏಳು ಸಿನಿಮಾಗಳು ತೆರೆಗೆ ಬರಲಿದೆ. ಸಿನಿಮಾಗಳ ಟೈಂಲೈನ್ ಹೀಗಿದೆ. “ಮಹಾವತಾರ್ ನರಸಿಂಹ” (2025), “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಮೂಡಿಬರಲಿವೆ. ಜುಲೈ 25ರಂದು “ಮಹಾವತಾರ್ ನರಸಿಂಹ” ಸಿನಿಮಾ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *