ತುಮಕೂರು : ನಿರಂತರ ಸುರಿದ ಮಳೆಗೆ ನಗರ ವ್ಯಾಪ್ತಿಯ ಕುರಿಪಾಳ್ಯದಲ್ಲಿ ಹಳೆಯ ಮನೆಗಳು ಕುಸಿದಿದ್ದು, ನಿರಾಶ್ರಿತರನ್ನು ಗಂಜಿ ಕೇಂದ್ರಕ್ಕೆ ಕೂಡಲೇ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಹಶೀಲ್ದಾರ್ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಕುರಿಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಬೇಕು. ಜಿಲ್ಲೆಯಾದ್ಯಂತ ಜಿಟಿ-ಜಿಟಿ ಮಳೆಯಾಗುತ್ತಿರುವುದರಿಂದ ಬೀಳುವ ಹಂತದ ಮನೆಗಳಲ್ಲಿರುವವರನ್ನೂ ಸಹ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ತಿಳಿಸಿದರಲ್ಲದೆ, ಹಾನಿಗೊಳಗಾಗಿರುವ ಮನೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಜೀವ ಹೋದರೆ ಮರಳಿ ಬರೋದಿಲ್ಲ. ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕೆಂದು ಮನೆ ಕಳೆದುಕೊಂಡು ನಿರಾಶ್ರಿತರಾದವರಲ್ಲಿ ಮನವಿ ಮಾಡಿದರು.
ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ನಿರಾಶ್ರಿತರಿಗೆ ಗುಣಮಟ್ಟದ ಆಹಾರ, ಕುಡಿಯುವ ನೀರಿನ ವ್ಯವಸ್ಥೆ, ಹಾಸಿಗೆ, ಹೊದಿಕೆ, ವಿದ್ಯುತ್ ಸಂಪರ್ಕ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೂಡಲೇ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕುರಿಪಾಳ್ಯ ಪ್ರದೇಶದಲ್ಲಿ ಬಹುಪಾಲು ಪೌರ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಇವರ ಮನೆಗಳ ಪಕ್ಕದಲ್ಲಿಯೇ ರೈಲು ಮಾರ್ಗ ಹಾದು ಹೋಗಿರುವುದರಿಂದ ಹಕ್ಕುಪತ್ರ ನೀಡಲು ಅವಕಾಶವಿರುವುದಿಲ್ಲವೆಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 50 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಿರುವ ಈ ಪೌರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮನೆಗಳ ಸಮೀಕ್ಷೆಯನ್ನು ತಹಶೀಲ್ದಾರ್ ಕಚೇರಿ ಹಾಗೂ ಮಹಾನಗರಪಾಲಿಕೆ ವತಿಯಿಂದ ಜಂಟಿಯಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಅವರು ಗಂಜಿ ಕೇಂದ್ರದಲ್ಲಿ ಸುಮಾರು 30 ಮಂದಿ ನಿರಾಶ್ರಿತರಿಗೆ ತಂಗಲು ಸ್ಥಳದಲ್ಲಿಯೇ ಆಹಾರ, ನೀರು, ಹಾಸಿಗೆ-ಹೊದಿಕೆಗಳ ವ್ಯವಸ್ಥೆ ಮಾಡಿದರು.
ಅದೇ ರೀತಿ ನಗರದ ಹೊರವಲಯದ ಗಂಗಸಂದ್ರ ಪ್ರದೇಶದಲ್ಲಿಯೂ ಗುಡಿಸಲುಗಳಿಗೆ ಮಳೆ ನೀರು ನುಗ್ಗಿರುವುದರಿಂದ ಗಂಗಸಂದ್ರ ಸಮುದಾಯ ಭವನದಲ್ಲಿ ಗಂಜಿ ಕೇಂದ್ರ ತೆರೆದು ಸುಮಾರು 12 ಮಂದಿಗೆ ಆಶ್ರಯ ನೀಡಲಾಗಿದೆ.