ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ 76.95 ಕಿ. ಮೀ.ಗೆ ವಿಸ್ತರಣೆಯಾಗಿದೆ. ಈಗ ಹಸಿರು ಮಾರ್ಗದಲ್ಲಿ ಒಟ್ಟು 32 ನಿಲ್ದಾಣಗಳಿವೆ. ನವೆಂಬರ್ನಲ್ಲಿ ಮೂರು ನಿಲ್ದಾಣಗಳ ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಆದರೆ ಬಿಎಂಆರ್ಸಿಎಲ್ ನಿರೀಕ್ಷೆ ಮಾಡಿದಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆಯೇ?.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮತಿ (ಬಿಎಂಆರ್ಸಿಎಲ್) ಯಾವುದೇ ಸಮಾರಂಭ ಇಲ್ಲದೇ ನವೆಂಬರ್ 7ರಂದು ನಾಗಸಂದ್ರ-ಮಾದಾವರ ನಡುವಿನ ವಿಸ್ತರಿತ ಮಾರ್ಗ 3.14 ಕಿ. ಮೀ. ಉದ್ಘಾಟನೆ ಮಾಡಿತು. ತುಮಕೂರು ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಮಾರ್ಗ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ನಿರೀಕ್ಷೆ ಮಾಡಿದಷ್ಟು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿಲ್ಲ. ಬಿಎಂಆರ್ಸಿಎಲ್ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ವರದಿಯನ್ನು ಮಾಡಿದೆ. ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆಯಿಂದ ಮಾದಾವರ ತನಕ ಈಗ ನಮ್ಮ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ.
ಪ್ರಯಾಣಿಕರ ಸಂಖ್ಯೆ: ನಾಗಸಂದ್ರ-ಮಾದಾವರ ಹಸಿರು ವಿಸ್ತರಿತ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಸೇರಿ ಮೂರು ನಿಲ್ದಾಣವಿದೆ. ಈ ಮಾರ್ಗದ ಉದ್ಘಾಟನೆ ಬಳಿಕ ನಗರದಲ್ಲಿ ನಮ್ಮ ಮೆಟ್ರೋ ಜಾಲ 76.95 ಕಿ. ಮೀ.ಗೆ ಹೆಚ್ಚಳವಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಬಿಎಂಆರ್ಸಿಎಲ್ ಪ್ರತಿದಿನ 44,000 ಪ್ರಯಾಣಿಕರ ನಿರೀಕ್ಷೆಯನ್ನು ಮಾಡಿತ್ತು. ಸದ್ಯ ಮೂರು ನಿಲ್ದಾಣಗಳು ಸೇರಿ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 11,303 ಆಗಿದೆ ಎಂದು ನವೆಂಬರ್ 7 ರಿಂದ 30ರ ತನಕದ ಅಂಕಿ ಅಂಶಗಳು ಹೇಳುತ್ತಿವೆ. ಮೂರು ನಿಲ್ದಾಣಗಳ ಪೈಕಿ ಮಾದಾವರದಲ್ಲಿ ಪ್ರತಿದಿನ 6,642. ಚಿಕ್ಕಬಿದರಕಲ್ಲು ನಿಲ್ದಾಣದಲ್ಲಿ 3,649 ಮತ್ತು ಮಂಜುನಾಥ ನಗರದಲ್ಲಿ 1,011 ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಈ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಆರಂಭದ ಬಳಿಕ ನಮ್ಮ ಮೆಟ್ರೋ ಜಾಲದಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆ 8 ಲಕ್ಷಕ್ಕೆ ಏರಿಕೆಯಾಗಿದೆ.
ನೆಲಮಂಗಲ, ಮಾದನಾಯನಕನಹಳ್ಳಿ, ಆನೆಪಾಳ್ಯ ಮುಂತಾದ ಪ್ರದೇಶಗಳ ಜನರು ಹೆಚ್ಚಾಗಿ ಹಸಿರು ವಿಸ್ತರಿತ ಮಾರ್ಗವನ್ನು ಬಳಕೆ ಮಾಡಲಿದ್ದಾರೆ. ವಿವಿಧ ಜಿಲ್ಲೆಗಳಿಂದ ತುಮಕೂರು ರಸ್ತೆಯ ಮೂಲಕ ಬೆಂಗಳೂರು ನಗರಕ್ಕೆ ಆಗಮಿಸುವ ಜನರು ಮಾದಾವರ ಬಳಿಯೇ ಬಸ್ ಇಳಿದು ಮೆಟ್ರೋ ಏರಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ನಿರೀಕ್ಷೆ ಮಾಡಿದಷ್ಟು ಇಲ್ಲವಾಗಿದೆ. ಮಾದವರ ನಿಲ್ದಾಣ ಬಿಐಇಸಿ ಮುಂಭಾಗದಲ್ಲಿದೆ ಇಲ್ಲಿ ನಡೆಯುವ ಕಾರ್ಯಕ್ರಮಗಳಿಂದಾಗಿ ನಮ್ಮ ಮೆಟ್ರೋ ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಐಇಸಿ ವೆಬ್ಸೈಟ್ ತೆರೆದರೆ ಇಲ್ಲಿಗೆ ಆಗಮಿಸಲು ನಮ್ಮ ಮೆಟ್ರೋ ಸೇವೆ ಇದೆ ಎಂಬ ಪಾಪ್ ಅಪ್ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ನಲ್ಲಿ ಬಿಐಇಸಿಯಲ್ಲಿ ಎರಡು ಕಾರ್ಯಕ್ರಮಗಳಿದ್ದವು. ಮಾದವರ ನಿಲ್ದಾಣದಿಂದ ಬಿಐಇಸಿಗೆ ಹೋಗಲು ಶಟಲ್ ಬಸ್ ವ್ಯವಸ್ಥೆ ಮಾಡುವಂತೆ ನಾವು ಆಯೋಜಕರಿಗೆ ಮನವಿ ಮಾಡಿದ್ದೆವು. ಡಿಸೆಂಬರ್ನಲ್ಲಿಯೂ ಮೂರು
ಕಾರ್ಯಕ್ರಮಗಳು ನಿಗದಿಯಾಗಿವೆ. ಆದ್ದರಿಂದ ಮೆಟ್ರೋಗೆ ಹೆಚ್ಚಿನ ಪ್ರಯಾಣಿಕರು ಬರಬಹುದು ಎಂದು ಅಂದಾಜಿಸಲಾಗಿದೆ.