ಹುಬ್ಬಳ್ಳಿ: ಶಕ್ತಿ ಯೋಜನೆ ಕೈ ಬಿಡಬೇಕು, ಪ್ರತ್ಯೇಕ ಆಟೊ ನಗರ ನಿರ್ಮಿಸಬೇಕು, ಓಲಾ, ಊಬರ್ ಆಪ್ಗೆ ಅವಕಾಶ ನೀಡಬಾರದು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಧಾರವಾಡ ಜಿಲ್ಲಾ ಆಟೊ ರಿಕ್ಷಾ ಚಾಲಕರ ಒಕ್ಕೂಟವು ನಗರದಲ್ಲಿಂದು ಪ್ರತಿಭಟನೆ ನಡೆಸಿತು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಆಟೊ ಚಾಲಕ, ಮಾಲೀಕರು, ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದ್ದು, ಯಾವುದೇ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಆಟೊ ಚಾಲಕರ, ಮಾಲೀಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹತ್ತಾರು ವರ್ಷಗಳಿಂದ ಹೋರಾಟ, ಸತ್ಯಾಗ್ರಹ ಮಾಡುತ್ತಲೇ ಬಂದಿದ್ದೇವೆ. ಶಾಸಕರು, ಸಚಿವರು, ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಿದ್ದೇವೆ. ಆದರೆ, ಇವರೆಗೂ ಒಂದೇ ಒಂದು ಬೇಡಿಕೆಯನ್ನು ಈಡೇರಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ನಾಯಕರಿಗೆ ಆಟೊ ಚಾಲಕರು ನೆನಪಾಗುತ್ತಾರೆ. ಆಯ್ಕೆಯಾದ ನಂತರ ನಾವ್ಯಾರೂ ಅವರಿಗೆ ಅಗತ್ಯವಿಲ್ಲ. ನಮ್ಮನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಶಕ್ತಿ ಯೋಜನೆಯಿಂದಾಗಿ ಆಟೊ ಚಾಲಕರು ಬೀದಿಗೆ ಬಿದ್ದಿದ್ದಾರೆ. ಬಸ್ನಲ್ಲಿ ಉಚಿತ ಪ್ರಯಾಣ ಮಾಡುತ್ತಿರುವುದರಿಂದ, ಆಟೊಗಳಿಗೆ ಬಾಡಿಗೆಯೇ ಇಲ್ಲವಾಗಿದೆ. ತಕ್ಷಣ ಶಕ್ತಿ ಯೋಜನೆ ಕೈಬಿಟ್ಟು, ಆಟೊದವರ ಬದುಕಿಗೆ ದಾರಿ ಮಾಡಿಕೊಡಬೇಕು. ಕಟ್ಟಡ ಕಾರ್ಮಿಕರಿಗೆ ದೊರೆಯವ ಸೌಲಭ್ಯ ಆಟೊ ಚಾಲಕರಿಗೂ ಸಿಗುವಂತಾಗಬೇಕು. ಸ್ಮಾರ್ಟ್ಸಿಟಿ ಯೋಜನೆಯಡಿ ಆಟೊ ನಿಲ್ದಾಣಗಳನ್ನು ಸ್ಥಾಪಿಸಬೇಕು, ಜನದಟ್ಟಣೆ ಹಾಗೂ ವ್ಯಾಪಾರ ಮಳಿಗೆಗಳು ಇರುವ ಸ್ಥಳಗಳಲ್ಲಿ ಬೆಂಗಳೂರು ಮಾದರಿಯಂತೆ ಆಟೊಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಬೇಕು. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಆಟೊ ಚಾಲಕರ ಸಮಸ್ಯೆಗಳ ಕುರಿತು ಚರ್ಚಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಬಾಬಾಜಾನ್ ಮುಧೋಳ, ಬಸೀರ್ ಮುಧೋಳ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಹನಮಂತಪ್ಪ ಪವಾಡಿ, ಪ್ರಕಾಶ ಉಳ್ಳಾಗಡ್ಡಿ, ಫಯಾಜ್ಅಹ್ಮದ್ ಜಮೀನ್ದಾರ್, ರಮೇಶ ಭೋಸಲೆ ಇತರರು ಇದ್ದರು.