ಹುಬ್ಬಳ್ಳಿ : ಹುಬ್ಬಳ್ಳಿಯ ಗ್ಯಾಸ್ ಸಿಲಿಂಡರ್ ದುರಂತದಲ್ಲಿ ಮೃತಪಟ್ಟ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿರುವುದು ವರದಿಯಾಗಿದೆ. ಮಂಜುನಾಥ ವಾಗ್ಮೋಡೆ (22) ಅವರು ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆ 6ಕ್ಕೆ ಏರಿಕೆಯಾದಂತಾಗಿದೆ. ಇನ್ನುಳಿದ ಮೂವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ದುರಂತದಲ್ಲಿ ಒಟ್ಟು 9 ಜನ ಗಾಯಗೊಂಡಿದ್ದರು. ಎಲ್ಲರನ್ನೂ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 22ಕ್ಕೆ ಸಿಲಿಂಡರ್ ಸ್ಫೋಟಗೊಂಡಿತ್ತು. ಇದರಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಶಂಕರ್ ಹಾಗೂ ಮಂಜುನಾಥ್ ಎನ್ನುವವರಿಗೆ ಕಳೆದ ಏಳು ದಿನಗಳಿಂದ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇನ್ನಿಬ್ಬರು ಇದೀಗ ಮೃತಪಟ್ಟಿದ್ದಾರೆ. ಮಂಜುನಾಥ್ ಎನ್ನುವವರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಶವಗಾರಾದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾಯಿನಗರದ ಅಚ್ಚವ್ವಳ ಕಾಲೊನಿಯಲ್ಲಿ ಕಳೆದ ಸೋಮವಾರ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಒಟ್ಟು 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಮಂದಿಯಲ್ಲಿ ಆರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಉರುಬಿ ಹಾಗೂ ಮಂಜುನಾಥ ವಾಗ್ಮೋಡೆ (29) ಮೃತ ದುರ್ದೈವಿಗಳು. ಇನ್ನುಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಮೃತರಾದ ನಿಜಲಿಂಗಪ್ಪ ಬೇಪುರಿಯ ದೇಹ ಶೇ 86 ರಷ್ಟು, ಸಂಜಯ್ ಸವದತ್ತಿಯ ದೇಹ ಶೇ 80 ರಷ್ಟು, ರಾಜು ಮೂಗೇರಿಯ ದೇಹ ಶೇ74 ರಷ್ಟು, ಲಿಂಗಾರಾಜು ಬೀರನೂರ ದೇಹ ಶೇ86 ರಷ್ಟು, ಶಂಕರ್ ಚವ್ಹಾಣ್ ದೇಹ ಶೇ99 ರಷ್ಟು ಸುಟ್ಟಿತ್ತು ಎಂದು ವೈದ್ಯರು ಹೇಳಿದ್ದರು. ಇನ್ನು ಚಿಂತಾಜನಕ ಸ್ಥಿತಿಯಲ್ಲಿದ್ದ ಮಂಜುನಾಥ್ ವಾಗ್ಮೋಡೆ ಅವರ ದೇಹವು ಶೇ70 ರಷ್ಟು ಸುಟ್ಟ ಚಿಂತಾಜನ ಆಗಿತ್ತು. ಪ್ರಕಾಶ್ ಬಾರಕೇರ್ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆ ಅವರ ದೇಹ ಶೇ74 ರಷ್ಟು ಸುಟ್ಟಿದೆ. ವಿನಾಯಕ್ ಭಾರಕೇರ್ ದೇಹ ಶೇ25 ರಷ್ಟು ಸುಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಅವರು ಮಾತನಾಡಿ, ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯ ವರೆಗೆ 6 ಜನ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಮಂಜುನಾಥ ವಾಘ್ಮೋಡೆ, ಶಂಕರ್ ಉರುಬಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಿನ್ನೆಯವರೆಗೆ ನಾಲ್ವರು ಸಾವನ್ನಪ್ಪಿದರು. ಇಂದು ಇನ್ನಿಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ. ಇನ್ನು ಮೂವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಇದರಲ್ಲಿ ಒಬ್ಬರಿಗೆ ಶೇ25 ರಷ್ಟು ಗಾಯವಾಗಿದ್ದು, ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಇನ್ನುಳಿದ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.