ಬೆಂಗಳೂರು: ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ಬೃಹತ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲಿದೆ. ಈ ಯೋಜನೆಯನ್ನು ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಎಫ್ಬಿಒಟಿ) ಮಾದರಿಯಲ್ಲಿ ಜಾರಿಗೆ ತರಲಾಗುತ್ತಿದೆ. ಯೋಜನೆಗಾಗಿ ಕೆಎಸ್ಐಐಡಿಸಿ ಟೆಂಡರ್ ಸಹ ಕರೆದಿದೆ.

ರಾಜ್ಯ ಸರ್ಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬಾಳೆಪುರ ಸಮೀಪ ಬೃಹತ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲಿದೆ. ಈ ಯೋಜನೆಗಾಗಿ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಈಗಾಗಲೇ ಟೆಂಡರ್ ಅನ್ನು ಕೂಡಾ ಕರೆದಿದ್ದು, ಪ್ರಾಥಮಿಕ ಕೆಲಸಗಳು ಪ್ರಾರಂಭವಾಗಿವೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಯೋಜನೆ ಜಾರಿಗೆ ಬರಲಿದೆ. ಆಸಕ್ತ ಕಂಪನಿಗಳು ಲಾಜಿಸ್ಟಿಕ್ ಪಾರ್ಕ್ ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ ಕುರಿತು ಟೆಂಡರ್ ಸಲ್ಲಿಕೆ ಮಾಡಬೇಕಿದೆ. ಲಾಜಿಸ್ಟಿಕ್ ಪಾರ್ಕ್, ವೇರ್ ಹೌಸ್, ಕೋಲ್ಡ್ ಸ್ಟೋರೇಜ್, ತಯಾರಿಕಾ ಘಟಕಗಳು ಸುಮಾರು 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಟೆಂಡರ್ ಅಂತಿಮಗೊಂಡ ಬಳಿಕ 36 ತಿಂಗಳಿನಲ್ಲಿ ಕೆಲಸ ಮುಗಿಸಬೇಕು ಎಂದು ಷರತ್ತು ಹಾಕಲಾಗುತ್ತದೆ. ಆಯ್ಕೆಯಾದ ಕಂಪನಿ 1.8 ಲಕ್ಷ ಚದರ ಮೀಟರ್ ಜಾಗದಲ್ಲಿ ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತ (ಎಫ್ಎಆರ್) ಮಾದರಿಯಲ್ಲಿ ಯೋಜನೆಯನ್ನು ಕೈಗೊಳ್ಳಬೇಕಿದೆ. ಕರ್ನಾಟಕ ರಾಜ್ಯ ಲಾಜಿಸ್ಟಿಕ್ ಯೋಜನೆ-2022ರ ಅನ್ವಯ ವಿವಿಧ ಕಾರಣಕ್ಕೆ ಈ ಲಾಜಿಸ್ಟಿಕ್ ಪಾರ್ಕ್ ಅನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಜನೆ ಒಂದೂವರೆ ವರ್ಷ ಹಿಂದಿನದು, ವಿವಿಧ ಕಾರಣಕ್ಕೆ ವಿಳಂಬವಾಗಿದ್ದು, ಈಗ ಚಾಲನೆ ಸಿಕ್ಕಿದೆ.
ಈ ಲಾಜಿಸ್ಟಿಕ್ ಪಾರ್ಕ್ ಯೋಜನೆಗೆ ಗುರುತಿಸಿರುವ ಜಾಗ ಬೆಂಗಳೂರು ಗ್ರಾಮಾಂತರದ ಉತ್ತರ ಭಾಗದಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ 18.6 ಕಿ. ಮೀ. ದೂರದಲ್ಲಿದೆ ಮತ್ತು ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ಗೆ ಹತ್ತಿರದಲ್ಲಿದೆ. ದೇವನಹಳ್ಳಿ ನಗರದ ಇಂಡಸ್ಟ್ರಿಯಲ್ ಹಬ್ ಆಗಿ ಪರಿವರ್ತನೆ ಹೊಂದುತ್ತಿದೆ. ಇಂತಹ ಸಂದರ್ಭದಲ್ಲಿ ಈ ಲಾಜಿಸ್ಟಿಕ್ ಪಾರ್ಕ್ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ದೇವನಹಳ್ಳಿಯಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣವು ಹಿಂದಿನ ಆರ್ಥಿಕ ವರ್ಷದಲ್ಲಿ 502,480 ಮೆಟ್ರಿಕ್ ಟನ್ ಸರಕು ಸಾಗಣೆಯನ್ನು ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 14ರಷ್ಟು ಹೆಚ್ಚು. ಇವುಗಳಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆ ಶೇ 21ರಷ್ಟು ಹಾಗೂ ದೇಶೀಯ ಸರಕು ಸಾಗಣೆ ಶೇ 4ರಷ್ಟು ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ಏರ್ ಇಂಡಿಯಾ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 200 ಕೋಟಿ ರೂ. ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪನೆ ಮಾಡಿದೆ. ಮೆನ್ಜೀಸ್ ಏವಿಯೇಷನ್ ಬಿಐಎಎಲ್ ಜೊತೆಗೂಡಿ 245,000 ಚದರ ಅಡಿ ಗ್ರೀನ್ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್ ಅನ್ನು ಪ್ರಾರಂಭಿಸಿದೆ. ಇದು ಭಾರತದಲ್ಲಿಯೇ ದೊಡ್ಡ ಸಾಮರ್ಥ್ಯದ ಟರ್ಮಿನಲ್ ಆಗಿದೆ. ದೇವನಹಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಚಟುವಟಿಕೆಗಳು ಹೆಚ್ಚುತ್ತಿದೆ ಎಂದು ಕೆಎಸ್ಐಐಡಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಎನ್ಹೆಚ್-48 ಮೂಲಕ ಈ ಪ್ರಮುಖ ಸರಕು ಸಾಗಣೆ ಕಾರ್ಯವು ನಡೆಯುತ್ತಿದೆ.
ಬಿವಿಎಲ್ ಗ್ರೂಪ್ನ 2 ಲಕ್ಷ ಚದರ ಅಡಿ ಗೋದಾಮು, ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ, ಐಟಿ ಪಾರ್ಕ್ ಮತ್ತು ದೇವನಹಳ್ಳಿ ಬ್ಯುಸಿನೆಸ್ ಪಾರ್ಕ್ಗಳು ಈ ಸರಕು ಸಾಗಣೆ ಸೇವೆಗೆ ಕೊಡುಗೆಯನ್ನು ನೀಡುತ್ತಿವೆ. ದೇವನಹಳ್ಳಿಯಿಂದ ಹೊಸಕೋಟೆ ತನಕ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಆದ್ದರಿಂದ ಲಾಜಿಸ್ಟಿಕ್ ಪಾರ್ಕ್ ಅನ್ನು ದೇವನಹಳ್ಳಿ ಸಮೀಪ ನಿರ್ಮಾಣ ಮಾಡಲು ಸರ್ಕಾರ ಸಹ ಉತ್ಸುಕವಾಗಿದೆ. ಕೆಎಸ್ಐಐಡಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಲಾಜಿಸ್ಟಿಕ್ ಪಾರ್ಕ್ ಯೋಜನೆಗಾಗಿ 10 ಎಕರೆ ಜಾಗವನ್ನು 30 ವರ್ಷಗಳ ಲೀಸ್ ಮೇಲೆ ಕಂಪನಿಗೆ ನೀಡಲಾಗುತ್ತದೆ. ಈ ಒಪ್ಪಂದವನ್ನು ಮತ್ತೊಂದು 30 ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ. ಹರಾಜುದಾರರು ಕನಿಷ್ಠ 85 ಲಕ್ಷ ರೂ. ಪ್ರತಿ ಎಕರೆ (ಜಿಎಸ್ಟಿ ಹೊರತುಪಡಿಸಿ) ಸ್ಥಳಕ್ಕಾಗಿ ಕನಿಷ್ಠ 10 ಕೋಟಿ ರೂ. ಒಂದು ಬಾರಿ, ಮರಳಿಸದ ಪ್ರೀಮಿಯಂ ಪಾವತಿಸಬೇಕಿದೆ. ಆಯ್ಕೆಯಾದ ಕಂಪನಿ ಮೊದಲ 30 ವರ್ಷಗಳಿಗೆ ಪ್ರತಿ ಎಕರೆಗೆ ವಾರ್ಷಿಕ ಲೀಸ್ ಬಾಡಿಗೆ 1 ಲಕ್ಷ ರೂ. ಮತ್ತು ನಂತರ 4.2 ಲಕ್ಷ ರೂ. (ಎರಡೂ ಜಿಎಸ್ಟಿ ಹೊರತುಪಡಿಸಿ) ಪಾವತಿಸಬೇಕಾಗುತ್ತದೆ. ಕನಿಷ್ಠ ಮಿತಿಗಿಂತ ಕಡಿಮೆ ಇರುವ ಟೆಂಡರ್ಗಳನ್ನು ತಿರಸ್ಕರಿಸಲಾಗುತ್ತದೆ.