ಹುಳಿಯಾರು: ಪಟ್ಟಣದ ಕೆ.ಪಿ.ಎಸ್ ಶಾಲಾ ಮಕ್ಕಳನ್ನು ಶಿಕ್ಷಕರು ಕ್ಷೇತ್ರ ಭೇಟಿಯಲ್ಲಿ ಕನಕ ಸರ್ಕಲ್ ಬಳಿ ಇರುವ ಹೋಲಿ ಟ್ರೇನಿಟಿ ಬಿಲಿವರ್ಸ್ ಈಸ್ಟçನ್ ಚರ್ಚ್ಗೆ ಕರೆದೊಯ್ದಾಗ, ಚರ್ಚ್ ಫಾದರ್ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಸುಮಾರು 100 ಕ್ಕೂ ಹೆಚ್ಚು ಮಕ್ಕಳನ್ನು ಇಟ್ಟಿಗೆ ಮತ್ತು ಹೆಂಚಿನ ಕಾರ್ಖಾನೆ ತೋರಿಸಲು ಕರೆದುಕೊಂಡು ಹೋದವರು ಸುಮ್ಮನೆ ಚರ್ಚ್ ತೋರಿಸಿಕೊಂಡು ಬರಬೇಕಿತ್ತು. ಏಸು ಕ್ರಿಸ್ತನ ನಡೆದು ಬಂದ ಹಾದಿಯನ್ನು ಮಾತ್ರ ಮಕ್ಕಳಿಗೆ ತಿಳಿಸಬೇಕಿತ್ತು. ಆದರೆ ಫಾದರ್ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವುದು ಎಷ್ಟು ಸರಿ? ಯಾರು ಏಸು ಕ್ರಿಸ್ತನನ್ನು ನಂಬುತ್ತಾನೆ ಅವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತೆ ಎಂದಿದ್ದು, ಮೂರ್ತಿ ಪೂಜೆ ಬಗ್ಗೆ ತುಚ್ಛವಾಗಿ ಮಾತನಾಡಿದ್ದು ಏಕೆ? ಇದರ ಜೊತೆಗೆ ದೇವರಿಗೆ ನೀಡುವ ಆಹುತಿ ಬಗ್ಗೆ ಮಾತನಾಡಿದ್ದು ಏಕೆ? ಮುಗ್ದ ಮಕ್ಕಳಿಗೆ ಏಕೆ ಧರ್ಮ ಬೋಧನೆ ಮಾಡಬೇಕಿತ್ತು ಎಂದು ಎ.ಬಿ.ವಿ.ಪಿ ಕಾರ್ಯಕರ್ತರು ಖಂಡಿಸಿದ್ದಾರೆ.

ಈ ವಿಚಾರವಾಗಿ ತಾಲ್ಲೂಕಿನ ಶಿಕ್ಷಣಾಧಿಕಾರಿ ಕಾಂತರಾಜು ರವರನ್ನು ಪ್ರಶ್ನಿಸಿದಾಗ, ಶಾಲೆಗಳಲ್ಲಿ ಕ್ಷೇತ್ರ ಭೇಟಿ ಇದೆ. ಕಾರ್ಖಾನೆ ಭೇಟಿಗೆ ಹೋದಾಗ ಬರುವ ದಾರಿಯಲ್ಲಿ ಚರ್ಚ್ ಮತ್ತು ಪೋಲೀಸ್ ಸ್ಟೇಷನ್ಗಳನ್ನು ಕೂಡ ಭೇಟಿ ಮಾಡಿಸಿ, ಕರೆದುಕೊಂಡು ಬಂದಿದ್ದೇವೆ ಎಂದು ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕಿ ಮಾಹಿತಿ ನೀಡಿದ್ದಾರೆ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.