ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಈವರೆಗೂ ಗುರುತಿಸದ 398 ಹೊಸ ಜಾತಿಗಳು ಪತ್ತೆ ಆಗಿವೆ.

ಅಲ್ಲದೆ, ಸಮೀಕ್ಷೆಯ ಸಂದರ್ಭದಲ್ಲಿ 2,53,954 ಜನರು ತಮ್ಮ ಜಾತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. 1,34,319 ಜನರು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಹೇಳಿಕೊಂಡಿದ್ದಾರೆ.
ಎಚ್. ಕಾಂತರಾಜ ಅವರು ಅಧ್ಯಕ್ಷರಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಈ ಸಮೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿಯಿದೆ. ದತ್ತಾಂಶಗಳ ಅಧ್ಯಯನ ವರದಿಯ ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ದತ್ತಾಂಶಗಳ ಅಧ್ಯಯನ ವರದಿ-2024’ರ 112ರಿಂದ 163ರವರೆಗಿನ ಪುಟಗಳಲ್ಲಿ ಹಿಂದುಳಿದ ಜಾತಿ, ಸಮುದಾಯಗಳನ್ನು ಪ್ರವರ್ಗವಾರು ಮರು ವರ್ಗೀಕರಣ ಮಾಡಿದ ಪಟ್ಟಿಯನ್ನು ಆಯೋಗ ನೀಡಿದೆ. ಅತ್ಯಂತ ಹಿಂದುಳಿದ ಜಾತಿಗಳನ್ನು ಪ್ರವರ್ಗ1ಎ, 1ಬಿ, ಅತಿ ಹಿಂದುಳಿದ ಜಾತಿಗಳನ್ನು ಪ್ರವರ್ಗ 2ಎ, 2ಬಿ, ಹಿಂದುಳಿದ ಜಾತಿಗಳನ್ನು ಪ್ರವರ್ಗ 3ಎ, 3ಬಿ ಎಂದು ಮರು ವರ್ಗೀಕರಣ ಮಾಡಿ, ಪ್ರತಿ ಪ್ರವರ್ಗದ ಅಡಿಗೆ ತಂದಿರುವ ಜಾತಿಯ ಹೆಸರು ಮತ್ತು ಆ ಜಾತಿಯ ಒಟ್ಟು ಜನಸಂಖ್ಯೆಯನ್ನು ನೀಡಿದೆ.
ಆ ಪಟ್ಟಿಯ ಪ್ರಕಾರ, ಪ್ರವರ್ಗ 1ಎಯಲ್ಲಿ 147, ಪ್ರವರ್ಗ 1ಬಿಯಲ್ಲಿ 386, ಪ್ರವರ್ಗ 2ಎಯಲ್ಲಿ 363, ಪ್ರವರ್ಗ 2ಬಿಯಲ್ಲಿ ಮುಸ್ಲಿಂ ಮತ್ತು ಉಪಜಾತಿಗಳು, ಪ್ರವರ್ಗ 3ಎಯಲ್ಲಿ 85, 3ಬಿಯಲ್ಲಿ 109 ಜಾತಿಗಳಿವೆ. ಈ ಎಲ್ಲ ಪ್ರವರ್ಗಗಳಲ್ಲಿ 200ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಒಟ್ಟು ಜಾತಿಗಳ ಸಂಖ್ಯೆ 47.
ಪ್ರವರ್ಗ 1ಎಯಲ್ಲಿ 200ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಮೂರು ಜಾತಿಗಳಿದ್ದರೆ, ಪ್ರವರ್ಗ 1ಬಿಯಲ್ಲಿ ಕೇವಲ ಐದು ಜನರನ್ನು ಹೊಂದಿರುವ ‘ಮರುತ್ತುವರ್’, 11 ಜನರಿರುವ ‘ರಾವಲ’ ಎಂಬ ಜಾತಿಯೂ ಸೇರಿದಂತೆ 200ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 16 ಜಾತಿಗಳಿವೆ. ಪ್ರವರ್ಗ 2ಎಯಲ್ಲಿ ತಲಾ ನಾಲ್ಕು ಜನರಿರುವ ‘ಶಿಲ್ಪಿ’, ‘ಒಸ್ತಾ’ ಮತ್ತು ‘ಪಟ್ಟು ನಾಲ್ಕರ್’, ಆರು ಜನರಿರುವ ‘ನಂಬೀಶನ್’, ಏಳು ಜನರಿರುವ ‘ಕೊಟ್ಟಿಯಾ’ ಸೇರಿ 200ಕ್ಕೂ ಕಡಿಮೆ ಜನರಿರುವ 17 ಜಾತಿಗಳಿವೆ. ಪ್ರವರ್ಗ 3 ಎಯಲ್ಲಿ 200ಕ್ಕೂ ಕಡಿಮೆ ಜನಸಂಖ್ಯೆ ಇರುವ ಮೂರು ಜಾತಿಗಳಿದ್ದರೆ, ಪ್ರವರ್ಗ 3ಬಿಯಲ್ಲಿ ಲಿಂಗಾಯತ ಉಪ ಗುಂಪುಗಳ ಅಡಿಯಲ್ಲಿ ಬರುವ ಕೇವಲ ಮೂರು ಜನರಿರುವ ‘ಲಿಂಗದಾರ್’, ಒಂಬತ್ತು ಜನರಿರುವ ‘ವೀರಶೈವ ಮಲ್ಲಾವರ’, 11 ಜನರಿರುವ ‘ವೀರಶಿವ ಜಂಗಮ’ ಜಾತಿ ಸೇರಿ 200ಕ್ಕೂ ಕಡಿಮೆ ಜನಸಂಖ್ಯೆ ಇರುವ ಎಂಟು ಜಾತಿಗಳಿವೆ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ರಾಜ್ಯದಾದ್ಯಂತ 1,35,35,773 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ 180 ಪರಿಶಿಷ್ಟ ಜಾತಿಗಳು ಮತ್ತು 105 ಪರಿಶಿಷ್ಟ ಪಂಗಡಗಳು ಸೇರಿದಂತೆ 1,351 ಜಾತಿಗಳು, ಸಮುದಾಯಗಳು ಹಾಗೂ ಈವರೆಗೂ ಗುರುತಿಸದೇ ಇರುವ ಜಾತಿಗಳು, ತಮ್ಮ ಜಾತಿ ಯಾವುದೆಂದು ಗೊತ್ತಿಲ್ಲದವರು, ಯಾವುದೇ ಜಾತಿಗೆ ಸೇರಿದವರಲ್ಲ ಎಂದವರು ಮತ್ತು ತಮ್ಮ ಜಾತಿ ಬಹಿರಂಗಪಡಿಸಲು ನಿರಾಕರಿಸಿದವರು ಸೇರಿ ಒಟ್ಟು 5,98,14,942 ಜನರಿಂದ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ ಎಂದು ಆಯೋಗ ಹೇಳಿದೆ.
ಮನೆ ಮನೆ ಸಮೀಕ್ಷೆಯ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಮಾಹಿತಿಯನ್ನು ಸಂಗ್ರಹಿಸಲು ವಿವಿಧ 54 ಮಾನದಂಡಗಳು, ಪ್ರಶ್ನಾವಳಿಗಳನ್ನು ಒಳಗೊಂಡಂತೆ ಜನಸಂಖ್ಯೆ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಸಾಂಪ್ರದಾಯಿಕ ಉದ್ಯೋಗ, ಆದಾಯ, ಸಾಮಾಜಿಕ ಸ್ಥಾನಮಾನ ಮತ್ತು ಸ್ವತ್ತು/ಆಸ್ತಿ ಮಾಲೀಕತ್ವ ಮುಂತಾದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಪ್ರತಿಯೊಂದು ಜಾತಿಯ ಹೆಸರು, ಆ ಜಾತಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಕುಟುಂಬಗಳು, ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಜನಸಂಖ್ಯೆ, ಪುರುಷ ಮತ್ತು ಮಹಿಳೆಯರು, ಆ ಜಾತಿಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರು ಹೀಗೆ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಲಾಗಿದೆ ಎಂದೂ ಅಧ್ಯಯನ ವರದಿಯಲ್ಲಿ ಆಯೋಗ ವಿವರಿಸಿದೆ.