ಬೆಂಗಳೂರು : “ಅವರು (ಸಿದ್ದರಾಮಯ್ಯ) ಐದು ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿರುವುದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
“ಇದಕ್ಕೆ ನನ್ನ ಅಭ್ಯಂತರವೂ ಇಲ್ಲ, ಆಕ್ಷೇಪವೂ ಇಲ್ಲ. ನನಗೂ ಬೇರೆ ಆಯ್ಕೆಯೂ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಏನು ಹೇಳುತ್ತದೋ ಅದನ್ನು ಪಾಲಿಸುವುದು ನನ್ನ ಕರ್ತವ್ಯ. ಅವರ ಬೆಂಬಲಕ್ಕೆ ನಿಲ್ಲುತ್ತೇನೆ” ಎಂದರು.

ಕೆಲವರು ನಿಮ್ಮನ್ನು ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರಲ್ಲಾ? ಎಂಬ ಪ್ರಶ್ನೆಗೆ, “ನಾನು ಏನನ್ನೂ ಚರ್ಚಿಸಲು ಬಯಸುವುದಿಲ್ಲ. ಲಕ್ಷಾಂತರ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ತರಲು ಶ್ರಮ ಪಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಮಾತ್ರ ಕಷ್ಟಪಟ್ಟಿಲ್ಲ ಅವರ ಬಗ್ಗೆಯೂ ಯೋಚಿಸಬೇಕಿದೆ” ಎಂದು ಮಾರ್ಮಿಕವಾಗಿ ನುಡಿದರು.
ಐತಿಹಾಸಿಕ ನಂದಿಗಿರಿಧಾಮದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಪೂರ್ಣ 5 ವರ್ಷ ನಾನೇ ಸಿಎಂ ಆಗಿರ್ತೇನೆ” ಎಂದು ಹೇಳಿದ್ದರು.
ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿಗರ ಮಾತುಗಳಿಗೆ ಉತ್ತರಿಸಿದ ಅವರು, “ಬಿಜೆಪಿಯವರು ಶುದ್ಧ ಸುಳ್ಳು ಹೇಳುತ್ತಾರೆ. ನಾನು ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೇನೆ. ನಮ್ಮ ಸರ್ಕಾರ ಬಂಡೆಯಂತೆ ದೃಢವಾಗಿ ಇರಲಿದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಇದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅವರ ಸೇವೆ ಏನೆಂಬುದನ್ನು ಅವರೇ ತಿಳಿಸಲಿ. ಮೊದಲು ಬಿಜೆಪಿಯವರು ಹಗಲು ಕನಸು ಕಾಣುವುದನ್ನು ಬಿಡಲಿ” ಎಂದಿದ್ದರು