ಬೆಂಗಳೂರು: ಕುಮಾರಸ್ವಾಮಿಯವರನ್ನು ನಾನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಿದ್ರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರು ನನ್ನನ್ನು ಕುಳ್ಳ ಅಂತಾರೆ, ನಾನು ಪ್ರೀತಿಯಿಂದ ಅವರನ್ನು ಕರಿಯಣ್ಣ ಅಂತಾನೇ ಕರೆಯುತ್ತಿದ್ದೆ.
ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ಕುಳ್ಳ ಅಂತ ಕರೆಯುತ್ತಾರೆ. ಭಾಷಣ ಮಾಡುವಾಗ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಬಣ್ಣದ ಆಧಾರದ ಮೇಲೆ ಜನಾಂಗೀಯ ನಿಂದನೆ ಮಾಡಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಭಾನುವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಪರವಾಗಿ ಜಮೀರ್ ಅಹ್ಮದ್ ಪ್ರಚಾರದ ವೇಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಭಾಷಣದ ಮಧ್ಯೆ “ಕರಿಯ ಕುಮಾರಸ್ವಾಮಿ” ಎಂದು ಟೀಕಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದಾರೆ.
ಚುನಾವಣಾ ಪ್ರಚಾರದ ಭಾಷಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್” ಎಂದು ಉರ್ದುವಿನಲ್ಲಿ ಹೇಳಿದ್ದಾರೆ. ಸಿ ಪಿ ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ ಹೋಗಬೇಕು ಅಂತ ಅಂದುಕೊಂಡಿದ್ದರು, ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ಗೆ ಹೋಗಿಲ್ಲ ಎಂದು ಸಚಿವ ಜಮೀರ್ ಅವರು ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿಯನ್ನ ನಡೆಸಿದ್ದರು.
ಇನ್ನೂ ಜಮೀರ್ ಅವರ ಹೇಳಿಕೆಗೆ ಜೆಡಿಎಸ್ ರಾಜ್ಯ ಘಟಕ ಕಿಡಿಕಾರಿದ್ದು, ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ವಸತಿ ಖಾತೆ ಸಚಿವ ಜಮೀರ್ ಅವರು ಜನಾಂಗೀಯ ನಿಂದನೆ ಮಾಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ (10-11-2024) ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ “ಕಾಲಾ ಕುಮಾರಸ್ವಾಮಿ” (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ.
ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಜೋದಿಸಿರುವ ಜಮೀರ್ ಅಹ್ಮದ್ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ. ಅಪರಾಧ ಎಂದು ಜೆಡಿಎಸ್ ರಾಜ್ಯ ಘಟಕ ಟೀಕಿಸಿದೆ.
ಈ ಕೂಡಲೇ ಗೃಹ ಸಚಿವರಾದ ಪರಮೇಶ್ವರ್ ಹಾಗೂ ರಾಮನಗರ ಜಿಲ್ಲಾ ಪೊಲೀಸರು ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಾತ್ಯತೀತ ಜನತಾದಳ ಪಕ್ಷವು ಆಗ್ರಹಿಸುತ್ತದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಉಳಿಸಿಕೊಂಡಿದ್ದರೇ ಮೊದಲು ಈ ಜನಾಂಗೀಯ ದ್ವೇಷಿ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.