BJP ಮಾಡಿದ್ರೆ ಬದಲಾವಣೆ, Congress ಮಾಡಿದ್ರೆ ಅಪಪ್ರಚಾರ: ನೀವು ಕೆಂಪೇಗೌಡ ವಿರೋಧಿಯೇ?’

BJP ಮಾಡಿದ್ರೆ ಬದಲಾವಣೆ, Congress ಮಾಡಿದ್ರೆ ಅಪಪ್ರಚಾರ: ನೀವು ಕೆಂಪೇಗೌಡ ವಿರೋಧಿಯೇ?'

ಬೆಂಗಳೂರು,: ರಾಜ್ಯದಲ್ಲಿ ರಾಮನಗರ ಜಿಲ್ಲೆ ಹೆಸರು ಬದಲಾವಣೆಯ ರಾಜಕೀಯ ಜಟಾಪಟಿ ಮುಂದುವರಿದಿದೆ. ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡಿ ಹಾಗೂ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮುಂದುವರಿಸಲು ಅನುಮೋದನೆ ನೀಡಲಾಯಿತು. ಇದನ್ನು ವಿರೋದಿಸಿರುವ ಬಿಜೆಪಿಯು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ವಿರೋಧಿಯೇ? ಎಂದು ಸಾರಿಗೆ ಇಲಾಖೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶ್ನಿಸಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ರಾಜ್ಯಗಳಲ್ಲಿ ಊರಿನ ಹೆಸರು ಬದಲಾವಣೆ ಮಾಡಿದರೆ ಪ್ರಚಾರ- ಕರ್ನಾಟಕದಲ್ಲಿ ಮಾಡಿದರೆ ಅಪಪ್ರಚಾರ. ನೀವು ಮಾಡಿದರೆ ಮಾತ್ರವೇ ಬದಲಾವಣೆ, ಕಾಂಗ್ರೆಸ್ ಮಾಡಿದರೆ ಅಪಪ್ರಚಾರವೇ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ಬಿಜೆಪಿಯದ್ದು ಕೀಳು ಅಭಿರುಚಿ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರವಾಗಿ ಬಿಜೆಪಿ ವಿರುದ್ಧ ಗರಂ ಆದ ಸಚಿವರು, ಬಿಜೆಪಿ ನಾಯಕರ ಹೊಟ್ಟೆ ಉರಿಗೆ ಯಾವುದೇ ಮದ್ದಿಲ್ಲ. ಅಭಿವೃದ್ಧಿ ಬದಲು ರಾಜಕಾರಣ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಾ, ಇಲ್ಲಸಲ್ಲದ ಅಪಪ್ರಚಾರ ಮಾಡಿ ಪ್ರಚಾರ ಪಡೆಯುವ ಕೀಳು ಅಭಿರುಚಿ ಅವರದ್ದಾಗಿದೆ ಎಂದು ಹರಿಹಾಯ್ದರು. ಶ್ರೀ ರಾಮಚಂದ್ರರ ಹೆಸರಿರುವ ರಾಮನಗರ ತಾಲ್ಲೂಕು ರಾಮನಗರ ತಾಲ್ಲೂಕಾಗಿಯೇ ಉಳಿಯುತ್ತದೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರ ರಾಮನಗರವೆಂದೇ ಇನ್ನು ಮುಂದೆಯೂ ಕರೆಯಲ್ಪಡುತ್ತದೆ ಎಂದು ಅವರು ವಿವರಿಸಿದರು.

ಇಂದು ಬೆಂಗಳೂರು ನಗರವು ವಿಶ್ವಭೂಪಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಕಾರಣರಾದ, ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದ ನಿರ್ಮಾತೃ ಶ್ರೀಮಾನ್ ಕೆಂಪೇಗೌಡರು ಹೆಸರಿಸಿದ ಬೆಂಗಳೂರು ನಗರದ ಹೆಸರನ್ನು ಈ ಹಿಂದೆ ಬೆಂಗಳೂರು ಜಿಲ್ಲೆಯಲ್ಲಿಯೇ ಒಂದಾಗಿದ್ದ ಜಿಲ್ಲೆಗೆ, ನಾಮಕರಣ ಮಾಡಲಾಗಿದೆ. ಆ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪ ಕರ್ನಾಟಕದ ಸರ್ಕಾರದ್ದಾಗಿದೆ. ಹೀಗಿದ್ದಾಗ ಅದಕ್ಕೆ ಏಕೆ ಅಡ್ಡಗಾಲು? ಅಂದರೆ ನೀವು ಶ್ರೀಮಾನ್ ಕೆಂಪೇಗೌಡರು ನಾಮಕರಣ ಮಾಡಿರುವ ಬೆಂಗಳೂರು ಹೆಸರಿನ ವಿರೋಧಿಯೇ? ಎಂದು ಅವರು ಮರು ಪ್ರಶ್ನಿಸಿದರು.

ಈಗಿನ ರಾಮನಗರ ಜಿಲ್ಲೆ ಹಿಂದಿನ ಬೆಂಗಳೂರು ನಗರ ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಎಂಬುದನ್ನು ಬಿಜೆಪಿ ಅವರು ಸ್ಬಲ್ಪ ಇತಿಹಾಸದ ಪುಟಗಳನ್ನು ತೆರೆದು ಓದಿದರೆ ಅರ್ಥವಾಗುತ್ತದೆ. ರಾಮನಗರ ಬೆಂಗಳೂರು ಜಿಲ್ಲೆಯಲ್ಲಿಯೇ ಇತ್ತು, ನಂತರ ಬೆಂಗಳೂರು ಗ್ರಾಮಾಂತರವೆಂದು, ತದ ನಂತರ ರಾಮನಗರವೆಂದು ಮರು ನಾಮಕರಣವಾಯಿತು ಎಂದು ಇತಿಹಾಸ ನೆನಪಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗುಜರಾತ್ ಅಹಮದಾಬಾದ್ ನಲ್ಲಿನ ಹೆಸರಾಂತ ಮೊಟೇರಾ ಸರದಾರ್ ವಲ್ಲಭಬಾಯಿ ಪಟೇಲ್ (ಸ್ವಾತಂತ್ರ್ಯ ಹೋರಾಟಗಾರರಾದ ಧೀಮಂತ ನಾಯಕ) ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. ಬಿಜೆಪಿ ಹೆಸರು ಬದಲಾಯಿಸಿದ್ದರ ಪಟ್ಟಿಯನ್ನು ಸಚಿವರು ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆ * ಅಲಹಾಬಾದ್ – ಪ್ರಯಾಗ್ ರಾಜ್ * ಫೈಜಾಬಾದ್-ಅಯೋಧ್ಯ * ಮುಸ್ತಫಾಬಾದ್- ರಾಂಪುರ ಮಹಾರಾಷ್ಟ್ರದಲ್ಲಿ ಹೆಸರು ಬದಲಾವಣೆ * ಔರಂಗಾಬಾದ್ – ಛತ್ರಪತಿ ಸಾಂಬಾಜಿ ನಗರ * ಒಸಮಾನಾಬಾದ್- ಧರ್ಶಿವ್ * ಅಹಮದ್ನಗರ- ಅಹಲ್ಯಾನಗರ ಇನ್ನೂ ಬಿಹಾರದ ಗಯಾ – ಗಯಾ ಜೀ ಎಂದು ಊರುಗಳ ಹೆಸರುಗಳ ಬದಲಾವಣೆ ಹಾಗೂ ದೆಹಲಿಯ ರಸ್ತೆಗಳ ಹೆಸರುಗಳ ಮರುನಾಮಕರಣ, ಈ ರೀತಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮರು ಹೆಸರಿಸುವ ಊರು/ ರಸ್ತೆಗಳ ಬಹುದೊಡ್ಡ ಪಟ್ಟಿಯೇ ಇದೆ. ಆಗೆಲ್ಲಾ ಅಬ್ಬರಿಸಿ ಬೊಬ್ಬಿರಿದು ಪ್ರಚಾರ ಪಡೆದ ಬಿಜೆಪಿ ಅವರಿಗೆ ನಮ್ಮ ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ್ದನ್ನು ಸಹಿಸಲಾಗುತ್ತಿಲ್ಲವಲ್ಲ ಎಂಬುದೇ ದುಃಖಕರ ಸಂಗತಿ ಎಂದು ಅವರು ಲೇವಡಿ ಮಾಡಿದರು. ಬಿಜೆಪಿ ನಾಯಕರಿಗೆ ಸೈದ್ಧಾಂತಿಕ ನೆಲೆಯಲ್ಲಿ ರಾಜಕಾರಣ ಮಾಡುವ ಯಾವುದೇ ವಿಷಯ ವಸ್ತುಗಳು ಬೇಕಾಗಿಲ್ಲ. ಅವರಿಗೆ ಅಪಪ್ರಚಾರವೇ ಪ್ರಚಾರದ ವಸ್ತು ವಿಷಯವಾಗಿದೆ ಎಂದು ರಾಮಲಿಂಗಾ ರೆಡ್ಡಿ ಅವರು ಟಾಂಗ್ ನೀಡಿದರು.

Leave a Reply

Your email address will not be published. Required fields are marked *