ಬೆಂಗಳೂರು: ವಕ್ಫ್ ಹೆಸರನಲ್ಲಿ ಬಡವರ ಜಮೀನು ಮನೆ ಕಿತ್ತುಕೊಳ್ಳಲು ಹೊರಟ ಸರ್ಕಾರ, ಬಿಪಿಎಲ್ ಕಾರ್ಡ್ ಪರಿಷ್ಕರಣೆ ಹೆಸರಿನಲ್ಲಿ ಬಡವರ ಅನ್ನ ಕಿತ್ತುಕೊಳ್ಳಲು ಮುಂದಾಗಿತ್ತು, ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡುವ ಮೂಲಕ ಆರೋಗ್ಯ ಸೇವೆಯನ್ನು ಕೈಗೆಟುಕದಂತೆ ಮಾಡಲು ಮುಂದಾಗಿದೆ, ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ದರ ಏರಿಕೆ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ವೈದ್ಯರುಗಳ ಘಟಕದ ಅಧ್ಯಕ್ಷ ಡಾ.ಕೇಶವಕುಮಾರ್ ಆಗ್ರಹಿಸಿದ್ದಾರೆ.
ನಗರದ ಎಎಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಡತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಷನ್ಗೆ ಮೊದಲು 10 ರೂಪಾಯಿ ಇದ್ದ ದರವನ್ನು 20 ರೂಪಾಯಿಗೆ ಏರಿಕೆ ಮಾಡಲಾಗಿದೆ. ಒಳರೋಗಗಳಿಗೆ 25 ರೂಪಾಯಿ ಇದ್ದ ದರವನ್ನು 50 ರೂಪಾಯಿಗೆ ಏರಿಕೆ ಮಾಡಿದ್ದು, ರಕ್ತ ಪರೀಕ್ಷೆ ಶುಲ್ಕವನ್ನು 70 ರೂಪಾಯಿಗಳಿಂದ 120 ರೂಪಾಯಿಗೆ ಏರಿಕೆ ಮಾಡುವ ಮೂಲಕ ಬಡವರ ಮೇಲೆ ಮತ್ತಷ್ಟು ಹೊರೆಯಾಗಿದೆ ಎಂದರು.
ಈ ಮೊದಲೇನು ಆಸ್ಪತ್ರೆಯಲ್ಲಿ ಪಡೆಯುವ ಶುಲ್ಕದಿಂದ ಸರ್ಕಾರಕ್ಕೆ ಆದಾಯ ಬರುತ್ತಿರಲಿಲ್ಲ, ಅಭಿವೃದ್ಧಿಗೆ ಆ ಹಣವನ್ನು ನಂಬಿಕೊಂಡರಿಲ್ಲ. ಒಂದು ದರ ಇರಬೇಕು ಎನ್ನುವ ಕಾರಣಕ್ಕೆ ಕನಿಷ್ಠ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಆದರೆ ಆರೋಗ್ಯ ಮಂತ್ರಿಗಳು ಬಹಳ ವರ್ಷದಿಂದ ಶುಲ್ಕ ಏರಿಕೆ ಮಾಡಿಲ್ಲ, ಹಣದುಬ್ಬರ ಜಾಸ್ತಿಯಾಗಿದೆ, ನಿರ್ವಹಣೆ ಕಷ್ಟ ಆಗುತ್ತಿದೆ ಆಸ್ಪತ್ರೆ ಅಭಿವೃದ್ಧಿಗೆ ಹಣ ಬೇಕಾಗಿದೆ ಅದಕ್ಕೋಸ್ಕರ ದರ ಹೆಚ್ಚಳ ಮಾಡುತ್ತಿರುವುದಾಗಿ ಸಮರ್ಥನೆ ಮಾಡಿಕೊಂಡಿರುವುದು ನಾಚಿಕೆಗೇಡು ಎಂದರು.
ಸಾವಿರಾರು ಕೋಟಿ ರೂಪಾಯಿ ಬಜೆಟ್ ಮಂಡಿಸುವ ಸರ್ಕಾರಕ್ಕೆ ಜನರಿಗೆ ಆರೋಗ್ಯ ಸೇವೆ ಕೊಡಲು ಮಾತ್ರ ಹಣ ಇಲ್ಲವಾ? ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯರಿಲ್ಲ, ಲ್ಯಾಬ್ಗಳಲ್ಲಿ ಸರಿಯಾದ ಟೆಕ್ನಿಷಿಯನ್ಗಳಿಲ್ಲ, ವೈದ್ಯಕೀಯ ಉಪಕರಣಗಳಿಲ್ಲ, ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಸಿಗದೆ ಬಡವರು ಕಷ್ಟ ಅನುಭವಿಸುತ್ತಿದ್ದಾರೆ, ಮೊದಲು ಆ ಸಮಸ್ಯೆಗಳನ್ನು ಸರಿಪಡಿಸಿ ಎಂದರು.
ಬಡವರ ಬಗ್ಗೆ ಕಾಳಜಿ ಇದೆ ಎಂದು ಹೇಳುವ ಸರ್ಕಾರಕ್ಕೆ ಬಡವರ ಆರೋಗ್ಯದ ಬಗ್ಗೆ ಯಾವ ಕಾಳಜಿಯೂ ಇಲ್ಲ. ಈ ಕೂಡಲೇ ದರ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು, ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರೆತೆಯಿದ್ದು ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸರಿಯಾಗಿ ಯೋಚಿಸದೇ ವಕ್ಫ್ ಬೋರ್ಡ್ ನೋಟಿಸ್ ನೀಡಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಬಳಿಕ ನೋಟಿಸ್ ವಾಪಸ್ ಪಡೆದಿತ್ತು, ಬಿಪಿಎಲ್ ಕಾರ್ಡ್ ರದ್ದು ಮಾಡಿದ ಬಗ್ಗೆ ಜನ ವಿರೋಧ ವ್ಯಕ್ತಪಡಿಸಿದ ಬಳಿಕ ಬಿಪಿಎಲ್ ಕಾರ್ಡ್ ಮತ್ತೆ ಕೊಡುತ್ತೇವೆ ಎನ್ನುತ್ತಿದೆ. ಇದು ಯು ಟರ್ನ್ ಸರ್ಕಾರ ಎನ್ನುವುದು ಗೊತ್ತಾಗಿದೆ, ಈಗ ಆಸ್ಪತ್ರೆಗಳಲ್ಲಿ ದರ ಹೆಚ್ಚಳವನ್ನು ಕೂಡ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆರೋಗ್ಯ ಕ್ಷೇತ್ರಕ್ಕೆ ಎಷ್ಟು ಹಣ ಖರ್ಚು ಮಾಡಿದೆ ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಎಷ್ಟು ಬಜೆಟ್ ಇಡಲಾಗಿದೆ, ಎಷ್ಟು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ, ಅಲ್ಲಿನ ವ್ಯವಸ್ಥೆಗಳು ಎಷ್ಟು ಸರಿಯಾಗಿದೆ ಎಂದು ಮಾಹಿತಿ ಕೊಡಲಿ. ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಇಲ್ಲ, ಹೊಸದಾಗಿ ಬಂದಿರುವ ಯಂತ್ರೋಪಕರಣಗಳನ್ನು ಇನ್ನೂ ಜೋಡಿಸಿಲ್ಲ. ಕೆಆರ್ ಪುರಂ ಆಸ್ಪತ್ರೆಯಲ್ಲಿ ಐಸಿಯು ಘಟಕಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನು ಐದು ವರ್ಷದ ಮೊದಲೇ ತರಿಸಲಾಗಿದ್ದರು ಅದು ಧೂಳು ಹಿಡಿಯುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದ್ದು ಕೂಡಲೇ ಸರ್ಕಾರ ಇದರ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ದೇಶದ ಜನ ದುಡಿಯುವ ಹಣದ ಶೇಕಡಾ 30-40 ಭಾಗವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ದುಡಿಯುವ ದುಡ್ಡನ್ನೆಲ್ಲಾ ಆಸ್ಪತ್ರೆಗಾಗಿ ಖರ್ಚು ಮಾಡಿದರೆ ಜನ ಜೀವನ ಮಾಡುವುದು ಹೇಗೆ. ಆರೋಗ್ಯ ನಮ್ಮ ಮೂಲಭೂತ ಹಕ್ಕು, ಅದು ಉಚಿತವಾಗಿ ಸಿಗಬೇಕು. ಕೂಡಲೇ ಸರ್ಕಾರ ದರ ಏರಿಕೆ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.