ದಾವಣಗೆರೆ: ಅಕ್ರಮವಾಗಿ ಸಾಗುವಾನಿ ಮರ ಮಾರಾಟ ಆರೋಪದ ಬೆನ್ನಲ್ಲೇ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಅಮಾನತು ಮಾಡಲಾಗಿದೆ. ಅಮ್ಮನಗುಡ್ಡ ದೇವಸ್ಥಾನದ ಬಳಿ ರಸ್ತೆ ಬದಿಯಲ್ಲಿದ್ದ ಎರಡು ಸಾಗುವಾನಿ ಮರಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ ಎರಡು ಮರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಉಪ ಅರಣ್ಯಾಧಿಕಾರಿ ಹಾಗೂ ಇಬ್ಬರು ಗಸ್ತು ಅರಣ್ಯ ರಕ್ಷಕರನ್ನು ಅಮಾನತು ಮಾಡಲಾಗಿದೆ.
ಈ ವರ್ಷ ಜುಲೈ ೭ರಂದು ಅಮ್ಮನಗುಡ್ಡ ದೇವಸ್ಥಾನದ ಬಳಿ ರಸ್ತೆ ಬದಿಯಲ್ಲಿದ್ದ ಎರಡು ಸಾಗುವಾನಿ ಮರಗಳು ಮಳೆ ಗಾಳಿಗೆ ಬಿದ್ದು ಹೋಗಿದ್ದವು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಮರಗಳನ್ನು ಕಡಿದು ಡಿಪೋಗೆ ಸಾಗಿಸಲಾಗಿತ್ತು. ಬಳಿಕ ಮಾರಾಟ ಮಾಡಿದ್ದಾರೆಂದು ರೈತ ಸಂಘದವರು ಅರಣ್ಯ ಇಲಾಖೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಜೋಳದಹಾಳ್ ಉಪವಲಯ ಅರಣ್ಯಾಧಿಕಾರಿ ಗಿರೀಶ್, ಮಾವಿನಕಟ್ಟೆ ಶಾಂತಿಸಾಗರ ವಲಯದ ಗಸ್ತು ಅರಣ್ಯ ರಕ್ಷಕರಾದ ರಾಮು ಮತ್ತು ಜಯರಾಂ ಈ ಪ್ರಕರಣದಲ್ಲಿ ಭಾಗಿಯಾಗಿ ಅಕ್ರಮವಾಗಿ ಮರವನ್ನು ಮಾರಾಟ ಮಾಡಿರುವುದು ಮೇಲಧಿಕಾರಿಗಳ ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಎಫ್ ಆಶೀಶ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
೩.೧೫ ಲಕ್ಷ ಮೌಲ್ಯದ ಶ್ರೀಗಂಧದ ಮರ ಕಳ್ಳನ ಬಂಧನ: ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿ ಒಟ್ಟು ೩.೧೫ ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ ಪಡೆದಿದ್ದಾರೆ. ಚನ್ನಗಿರಿ ಪೊಲೀಸ್? ಠಾಣೆಯ ವ್ಯಾಪ್ತಿಯಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಪತ್ತೆ ಮಾಡಲು ಒಂದು ತಂಡವನ್ನು ರಚನೆ ಮಾಡಲಾಗಿತ್ತು. ಈ ಪೊಲೀಸ್? ತಂಡವು ಪ್ರಕರಣವನ್ನು ಭೇದಿಸಿ ಆರೋಪಿ ಸಲ್ಮಾನ್ ಖಾನ್ (೨೫) ಎಂಬಾತನನ್ನು ಬಂಧಿಸಿದ್ದಾರೆ.
ಎಳನೀರು ಕೀಳುವ ಕೆಲಸ ಮಾಡುತ್ತಿದ್ದಾ ಸಲ್ಮಾನ್ ಖಾನ್ ಮೂಲತಃ ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಕ್ಯಾಂಪ್ ನಿವಾಸಿ ಆಗಿದ್ದಾನೆ. ಈತನನ್ನು ಪೊಲೀಸರು ಬಂಧಿಸಿ ಆರೋಪಿಯಿಂದ ೩,೧೫,೦೦೦ ರೂಪಾಯಿ ಬೆಲೆ ಬಾಳುವ ೪೫ ಕೆಜಿ ಶ್ರೀಗಂಧದ ಮರದ ತುಂಡುಗಳು ಮತ್ತು ಚಕ್ಕೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಗರಗಸವನ್ನು ವಶಕ್ಕೆ ಪಡೆದಿದ್ದಾರೆ.