ವಿರಾಟ್ ಕೊಹ್ಲಿ ಮೇಲೆ ಆ ವಿಚಾರಕ್ಕೆ ನನಗೂ ಬೇಸರವಿದೆ: tejasvisurya ಹೇಳಿದ್ದೇನು?

ನಿಮ್ಹಾನ್ಸ್ ಪಾಲಿ ಟ್ರಾಮಾ ಘಟಕಕ್ಕೆ ಕೇಂದ್ರ ಅನುಮೋದನೆ: ಮೋದಿಗೆ ಧನ್ಯವಾದ ತಿಳಿಸಿದ Tejasvi Surya.

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ ಆರ್ಸಿಬಿ ಅಭಿಮಾನಿಗಳ ಸಾವು ದುರಂತದ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೇಸರ ಹಂಚಿಕೊಂಡಿದ್ದಾರೆ. ಇನ್ನು ಆರ್ಸಿಬಿ ಸಂಭ್ರಮಾಚರಣೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಆರ್ಸಿಬಿಯ ಐಪಿಎಲ್ ಕಪ್ನೊಂದಿಗೆ ಪೋಸ್ ಕೊಟ್ಟಿರುವ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 18 ವರ್ಷಗಳ ನಂತರ, ನಮಗೆ ಐಪಿಎಲ್ ಗೆದ್ದುಕೊಟ್ಟಿದ್ದಕ್ಕಾಗಿ ನಾವು ಆರ್ಸಿಬಿ ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಋಣಿಯಾಗಿದ್ದೇವೆ ಎನ್ನುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಆರ್ಸಿಬಿ ಕಪ್ ಹಿಡಿದು ಡಿಕೆ ಶಿವಕುಮಾರ್ ಫೋಟೋವನ್ನು ತೇಜಸ್ವಿ ಸೂರ್ಯ ಹಂಚಿಕೊಂಡಿದ್ದಾರೆ. ಕಾಲ್ತುಳಿತ ದುರಂತದ ಬೆನ್ನಲ್ಲೇ ಆರ್ಸಿಬಿ ಆಡಳಿತ ಮಂಡಳಿಯನ್ನು ಬಂಧಿಸಲಾಗಿದೆ ಮತ್ತು ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ ಎಂಬುದು ಒಳ್ಳೆಯದು. ಬೆಂಗಳೂರಿನಲ್ಲಿ ಭದ್ರತೆಗೆ ಅವರು ಪ್ರಾಥಮಿಕವಾಗಿ ಜವಾಬ್ದಾರರು. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಈಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಿಂತಿರುಗಿ, ತಮ್ಮ ಮುಂದಿನ ಐಪಿಎಲ್ ಸೀಸನ್ಗಾಗಿ ಅಭ್ಯಾಸ ಪ್ರಾರಂಭಿಸಬಹುದು ಎಂದು ಲೇವಡಿ ಮಾಡಿದ್ದಾರೆ.

ಆರ್ಸಿಬಿ ಆಟಗಾರರು ಮೈದಾನದಲ್ಲಿ ಅದ್ಭುತ ಕ್ರಿಕೆಟ್ ಮತ್ತು ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಿದರು ಮತ್ತು ನಮ್ಮ ಕ್ಲಬ್ಗೆ ಈ ದೀರ್ಘ ವೈಭವವನ್ನು ತಂದರು. ನಮಗೆ ಟ್ರೋಫಿ ಗೆದ್ದಿದ್ದಕ್ಕಾಗಿ ಸಿಎಂ ಮತ್ತು ಡಿಕೆ ಮತ್ತು ಅವರ ಕುಟುಂಬಗಳನ್ನು ಗೌರವಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಇತರ ಆಟಗಾರರು ಮತ್ತು ಆರ್ಸಿಬಿ ಆಡಳಿತ ಮಂಡಳಿಯು ಭದ್ರತಾ ಕ್ರಮಗಳ ಕಳಪೆ ವ್ಯವಸ್ಥೆಗಾಗಿ ತುಂಬಾ ಅಸಮಾಧಾನಗೊಂಡಿದ್ದೇವೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ RCB ತಂಡದ ಅಭಿನಂದನಾ ಸಮಾರಂಭಕ್ಕೆ ಅಭಿಮಾನಿಗಳನ್ನು ಬಹಿರಂಗವಾಗಿ ಆಹ್ವಾನಿಸಿದರು. ಯಾವುದೇ ಭದ್ರತಾ ವ್ಯವಸ್ಥೆಗಳು ಇರಲಿಲ್ಲ, ತುರ್ತು ಸಿದ್ಧತೆ ಇರಲಿಲ್ಲ ಮತ್ತು ಜನಸಂದಣಿಯ ನಿರ್ವಹಣೆ ಇರಲಿಲ್ಲ, ಅನಗತ್ಯವಾಗಿ ಗಮನ ಸೆಳೆಯುವ ಹತಾಶ ಪ್ರಯತ್ನದಲ್ಲಿ ಇಷ್ಟೊಂದು ದುರುಪಯೋಗ ಆಗಿದೆ ಎಂದು ತೇಜಸ್ವಿ ಸೂರ್ಯ ದೂರಿದ್ದಾರೆ.

ಈ ಕಾರ್ಯಕ್ರಮವು ಕಾಂಗ್ರೆಸ್ ಕುಟುಂಬ ಸಭೆಯನ್ನು ಹೋಲುತ್ತಿತ್ತು. ರಾಜಕಾರಣಿಗಳ ಪುತ್ರರು ಮತ್ತು ಮೊಮ್ಮಕ್ಕಳು ಹಾಜರಿದ್ದರು. ಇದು ರಾಜ್ಯ ಯೋಜಿತ ವಿಪತ್ತು ಹಾಗೂ ಆಡಳಿತದ ಸಂಪೂರ್ಣ ವೈಫಲ್ಯ. ರಾಜ್ಯ ನಾಯಕತ್ವವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಸರಿಯಾದ ವೈದ್ಯಕೀಯ ಆರೈಕೆ, ಕುಟುಂಬಗಳಿಗೆ ಪರಿಹಾರ ಮತ್ತು ದೀರ್ಘಕಾಲೀನ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಉಜ್ವಲ ಭವಿಷ್ಯವನ್ನು ಹೊಂದಿರುವ ಯುವ ಜೀವಗಳು ದುರಂತದಲ್ಲಿ ಸಾವನ್ನಪ್ಪಿರುವುದರಿಂದ ಅವರ ಜೀವಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಡಿಕೆ ಶಿವಕುಮಾರ್ ಕಣ್ಣೀರಿಟ್ಟ ವಿಡಿಯೋ ವೈರಲ್

ಕಾಲ್ತುಳಿತದಲ್ಲಿ ಸಣ್ಣ ವಯಸ್ಸಿನವರು ಸತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಾ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿದೆ. ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ಹೇಳಿದ್ದರು. ನಮ್ಮ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ದುರ್ಘಟನೆಯಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದು. ಇದರಿಂದ ನಾವು ಪಾಠವನ್ನು ಕಲಿಯಬೇಕು ಎಂದು ಹೇಳಿದ್ದರು.

ಈ ದುರ್ಘಟನೆ ನಡೆದಿರುವುದು ನಮ್ಮ ಕುಟುಂಬದಲ್ಲೇ ಎಂದು ಭಾವಿಸಿದ್ದೇವೆ. ಈ ದುರಂತದಲ್ಲಿ ಮೃತಪಟ್ಟವರು ನಮ್ಮ ಮನೆಯವರೇ ಮೃತಪಟ್ಟಿದ್ದಾರೆ ಎಂಬ ನೋವು ರಾಜ್ಯದಲ್ಲಿ ತುಂಬಿದೆ. ಈ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸತ್ತವರು ನಮ್ಮ ಕುಟುಂಬದ ಸದಸ್ಯರು. ಈ ಪರಿಸ್ಥಿತಿಯಲ್ಲಿ ನಾವು ಸಂತಾಪ ಸೂಚಿಸಬೇಕು. ರಾಜಕೀಯ ಮಾಡಬಾರದು ಎಂದು ಹೇಳಿದ್ದರು.

Leave a Reply

Your email address will not be published. Required fields are marked *