ಬೆಂಗಳೂರು: ಹೆಚ್ಚುತ್ತಿರುವ ಕಾಡು ಪ್ರಾಣಿಗಳ ಭೇಟೆ ಹಾಗೂ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮತ್ತೊಂದು ಹೊಸ ತಲೆ ನೋವು ಆರಂಭವಾಗಿದೆ.

ಕರ್ನಾಟಕದ ಹುಲಿ ಮೀಸಲು ಪ್ರದೇಶ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ) ಹೆಸರಿನಲ್ಲಿ ನಕಲಿ ವೆಬ್ಸೈಟ್ ನಲ್ಲಿ ಸಫಾರಿ ಬುಕಿಂಗ್ ಮಾಡಲಾಗುತ್ತಿದೆ. ಬಿಬಿಪಿ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶ (ಎನ್ಟಿಆರ್) ದಲ್ಲಿ, ನಕಲಿ ವೆಬ್ಸೈಟ್ ಗುರುತಿಸಲಾಗಿದ್ದು ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರವಾಸಿಗರು ಮತ್ತು ನಾಗರಿಕರು ಇದಕ್ಕೆ ಬಲಿಯಾಗದಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನೋಂದಾಯಿತ ಮತ್ತು ಪ್ರಚಾರ ಮಾಡಲಾದ ಸರ್ಕಾರಿ ಇಲಾಖೆಯ ಪೋರ್ಟಲ್ಗಳ ಮೂಲಕ ಬುಕಿಂಗ್ ಮಾಡುವಂತೆ ಇಲ್ಲವೇ ಬುಕಿಂಗ್ ಮಾಡಲು ಅರಣ್ಯ ಪ್ರದೇಶಗಳು ಮತ್ತು ಬಿಬಿಪಿಗೆ ಭೇಟಿ ನೀಡಬೇಕೆಂದು ಸೂಚಿಸಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿ ಬುಕಿಂಗ್ ಮಾಡುವ ಯಾವುದೇ ವೆಬ್ಸೈಟ್ ಇಲ್ಲ ಏಕೆಂದರೆ ಇದು ಮೀಸಲು ಅರಣ್ಯ ಪ್ರದೇಶವಾಗಿದೆ. ಇಂಟರ್ನೆಟ್ನಲ್ಲಿ ಹುಡುಕಿದಾಗ, ಇದು ನಕಲಿ ವೆಬ್ಸೈಟ್ ಎಂಬುದಾಗಿ ಕಂಡುಬಂದಿದೆ. ಇದು ವಯಸ್ಕರಿಗೆ ರೂ. 2,000 ಮತ್ತು ಮಕ್ಕಳಿಗೆ 1,000 ರೂ ಗೆ ಸಫಾರಿ ಟಿಕೆಟ್ಗಳನ್ನು ನೀಡುತ್ತಿದೆ. ಪಾವತಿ ಮಾಡಿದ ನಂತರ, ವಹಿವಾಟು ಉಲ್ಲೇಖದ ರಶೀದಿಯನ್ನು ರಚಿಸಲಾಗುತ್ತದೆ, ಆದರೆ ಬೇರೆ ಯಾವುದೇ ಸಫಾರಿ ವಿವರಗಳಿರುವುದಿಲ್ಲ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಈ ಟಿಕೆಟ್ ನಲ್ಲಿ ಸಫಾರಿ ಯಾವಾಗ (ದಿನಾಂಕ/ಸಮಯ) ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ನೀಡಿರುವ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದಾಗ, ಅದು ಜೈಪುರ ಮೂಲದ ಟ್ರಾವೆಲ್ ಏಜೆನ್ಸಿಗೆ ಸೇರಿದ್ದು ಎಂದು ಕಂಡುಬಂದಿದೆ. ಆ ವ್ಯಕ್ತಿಯು ಬಿಬಿಪಿಯ ಬಗ್ಗೆ ಬಹಳಷ್ಟು ವಿವರಗಳನ್ನು ಹೊಂದಿರುವಂತೆ ತೋರುತ್ತಿತ್ತು, ಆದರೆ ಅದು ಶುಲ್ಕ ವಿಧಿಸುತ್ತಿರುವ ಸಫಾರಿ ಟಿಕೆಟ್ಗಳನ್ನು ರಚಿಸಲು ಸಾಧ್ಯವಾಗಲಿಲ್ಲ ಎಂದು ಸೇನ್ ಹೇಳಿದರು. ನಾಗರಿಕರು ಜಾಗರೂಕರಾಗಿರಬೇಕು ಮತ್ತು ನಕಲಿ ವೆಬ್ಸೈಟ್ಗಳ ಮೋಸದ ಜಾಲಕ್ಕೆ ಬೀಳಬಾರದು ಎಂದು ಅವರು ಹೇಳಿದರು.
ಟಿಕೆಟ್ಗಳನ್ನು ಬುಕಿಂಗ್ ಮಾಡಲು ಬಿಬಿಪಿ ಮೀಸಲಾದ (bannerughattabiopark.org) ವೆಬ್ ಸೈಟ್ ಹೊಂದಿದ್ದು, ಅದು ಎಲ್ಲಾ ವಿವರಗಳನ್ನು ನೀಡುತ್ತದೆ. ದೂರು ದಾಖಲಿಸಲು ಇಲಾಖೆ ಬನ್ನೇರುಘಟ್ಟ ಪೊಲೀಸರೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ನಾಗರಹೊಳೆ ಹುಲಿ ಮೀಸಲು ಅರಣ್ಯದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಎಲ್ಲಾ ಹುಲಿ ಮೀಸಲು ಪ್ರದೇಶಗಳಿಗೆ ವೆಬ್ಸೈಟ್ಗಳ ಮೂಲಕ ನಕಲಿ ಸಫಾರಿ ಬುಕಿಂಗ್ ಮಾಡಲಾಗುತ್ತಿದೆ ಮತ್ತು ಇದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಎನ್ಟಿಆರ್ ನಿರ್ದೇಶಕಿ ಸೀಮಾ ಪಿಎ ತಿಳಿಸಿದ್ದಾರೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಸುಭಾಷ್ ಬಿ ಮಲ್ಖಡೆ ಹೇಳಿದ್ದಾರೆ.