ಬೆಳಗಾವಿ ಏರ್ಪೋರ್ಟ್ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಕೇಂದ್ರಕ್ಕೆ ಪತ್ರ ಬರೆಯಲು ಸೂಚನೆ

ಬೆಳಗಾವಿ ಏರ್ಪೋರ್ಟ್ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಕೇಂದ್ರಕ್ಕೆ ಪತ್ರ ಬರೆಯಲು ಸೂಚನೆ

ಬೆಂಗಳೂರು: ಕಲಬುರಗಿ ಸೇರಿದಂತೆ ರಾಜ್ಯದ ಎರಡನೇ ಹಂತದ 6 ನಗರಗಳಿಗೆ ವಿಮಾನಯಾನ ಸೇವೆಯನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮಂಗಳವಾರ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.

ಮಂಗಳವಾರ ಖನಿಜ ಭವನದಲ್ಲಿ ಐಟಿ – ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಜತೆಗೂಡಿ ಹಲವು ವಿಮಾನಯಾನ ಸಂಸ್ಥೆಗಳ ಉನ್ನತಾಧಿಕಾರಿಗಳ ಜೊತೆ ದೀರ್ಘ ಸಭೆ ನಡೆಸಿ ಚರ್ಚಿಸಿದರು. ಕಲಬುರಗಿ, ಮೈಸೂರು, ಬೀದರ್, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ (ಜಿಂದಾಲ್ ಟೌನ್ ಶಿಪ್) ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಗಳಿಂದ ರಾಜ್ಯ ಸೇರಿದಂತೆ, ಇತರ ರಾಜ್ಯಗಳಿಗೆ ವಿಮಾನಯಾನ ಸಂಪರ್ಕ ಹೆಚ್ವಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಇಂಡಿಗೋ, ಸ್ಟಾರ್ ಏರ್, ಏರ್ ಇಂಡಿಯಾ, ಆಕಾಶ್, ಅಲೈಯನ್ಸ್ ಏರ್ ವೇಸ್, ಸ್ಪೈಸ್ ಜೆಟ್ ಸೇರಿದಂತೆ ಎಲ್ಲ ಪ್ರಮುಖ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವಿಮಾನ ಸಂಚಾರಕ್ಕೆ ಕಲಬುರಗಿ ಹೆಚ್ಚು ಲಾಭದಾಯಕ ಮಾರ್ಗವಾಗಿದ್ದರೂ, ಅಲ್ಲಿಗೆ ಬೆಂಗಳೂರಿನಿಂದ ವಾರಕ್ಕೆ ಕೇವಲ ಮೂರು ದಿನ ಮಾತ್ರ ವಿಮಾನ ಸಂಚಾರ ಇದೆ. ಇದನ್ನು ಮತ್ತಷ್ಟು ಹೆಚ್ಚಿಸಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಇತರ ನಗರ ಹಾಗೂ ಅನ್ಯ ರಾಜ್ಯಗಳ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಇಬ್ಬರೂ ಸಚಿವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಎಂಆರ್ಓ ಸೇವೆಗೂ ಸಿದ್ಧ: ವಿಮಾನ ಸಂಚಾರದ ಜತೆಗೆ ಈ ವಿಮಾನ ನಿಲ್ದಾಣಗಳನ್ನು ವಿಮಾನಗಳ ನಿರ್ವಹಣೆ ಮತ್ತು ರಿಪೇರಿ (ಎಂಆರ್ಓ) ಕೇಂದ್ರಗಳಾಗಿಯೂ ಬಳಸಬಹುದು. ದೊಡ್ಡ ದೊಡ್ಡ ನಗರಗಳಲ್ಲಿ ಈ ಸೇವೆ ದುಬಾರಿ ಕೂಡ ಆಗುತ್ತದೆ. ಹೀಗಾಗಿ, ಬೆಳಗ್ಗೆ ಇಂತಹ ನಗರಗಳಿಂದ ಪ್ರಯಾಣಿಕರನ್ನು ಹೊತ್ತೊಯ್ದು ರಾತ್ರಿ ನಿಲುಗಡೆಗೆ ವಾಪಸ್ ಆಗಬಹುದು. ಬೇಕಾದರೆ ನಿಲುಗಡೆ ಶುಲ್ಕದಿಂದ ವಿನಾಯಿತಿ ನೀಡಬಹುದು ಎಂದು ಸಚಿವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಲಬುರಗಿಯಲ್ಲಿ ಈ ವ್ಯವಸ್ಥೆ ಮಾಡಿಕೊಡಲು ತಾವು ಸಿದ್ಧ ಇರುವುದಾಗಿಯೂ ಸಚಿವ ಖರ್ಗೆ ಹೇಳಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಮೈಸೂರು, ಕಲಬುರಗಿ, ಬೀದರ್, ವಿದ್ಯಾನಗರ ವಿಮಾನ ನಿಲ್ದಾಣಗಳ ಉಪಯೋಗ ಗರಿಷ್ಠ ಮಟ್ಟದಲ್ಲಿ ಆಗುತ್ತಲೇ ಇಲ್ಲ. ಕಲಬುರಗಿ-ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ವಾರಕ್ಕೆ ಮೂರು ದಿನ ಮಾತ್ರ ವಿಮಾನ ಓಡಾಡುತ್ತಿದೆ. ಸ್ಟಾರ್ ಮತ್ತು ಅಲೈಯನ್ಸ್ ವಿಮಾನಯಾನ ಸಂಸ್ಥೆಗಳು ಮೂರು ವರ್ಷಗಳಿಂದ ಹಾರಾಟ ನಿಲ್ಲಿಸಿವೆ. ಕಲಬುರಗಿ ಪ್ರವಾಸೋದ್ಯಮ ಕೇಂದ್ರವಾಗಿದೆ. ಇಲ್ಲಿಂದ ಪುಣೆ, ತಿರುಪತಿ, ಚೆನ್ನೈ, ಮುಂಬೈ ಹೀಗೆ ಹಲವು ಭಾಗಗಳಿಗೆ ವಿಮಾನ ಸಂಚಾರ ಆರಂಭಿಸಿದರೆ ಖಂಡಿತವಾಗಿಯೂ ಲಾಭ ತಂದುಕೊಡಲಿದೆ. ಇಂತಹ ಮಾರ್ಗಗಳಲ್ಲಿ ಸಂಸ್ಥೆಗಳು ಪ್ರಾಯೋಗಿಕ ಸೇವೆ ಕೈಗೊಂಡು ನೋಡಬಹುದು ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *