ತುಮಕೂರು : ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

ತುಮಕೂರು ಜಿಲ್ಲೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಇದೀಗ ಕ್ರೀಡಾಂಗಣ ನಿರ್ಮಾಣದ ಕನಸು ನನಸಾಗುತ್ತಿದೆ. ಡಿಸೆಂಬರ್‌ ತಿಂಗಳಲ್ಲೇ ಸ್ಟೇಡಿಯಂ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಬಗ್ಗೆ ಗೃಹಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಡಿಸೆಂಬರ್‌ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ವೇಳೆ ಕ್ರಿಕೆಟ್‌ ಮೈದಾನದ ಶಂಕುಸ್ಥಾಪನೆ ನಡೆಯಲಿದೆ.

ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕೆಎಸ್‌ಸಿಎ ಅಧ್ಯಕ್ಷ ಎ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು 938 ಕೋಟಿ ರೂ. ಮೊತ್ತದ 825 ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆದರೆ, 94 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಪಿ ಗೊಲ್ಲಹಳ್ಳಿ ಮತ್ತು ಸೂರೆಕುಂಟೆ ವ್ಯಾಪ್ತಿಯಲ್ಲಿ 41 ಎಕರೆ ಭೂಮಿಯನ್ನು ಕೆಐಎಡಿಬಿ ವತಿಯಿಂದ ಈಗಾಗಲೇ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌)ಗೆ ಹಸ್ತಾಂತರಿಸಲಾಗಿದೆ. ಬರೋಬ್ಬರಿ 150 ಕೋಟಿ ರೂ. ವೆಚ್ಚದ ಸುಸಜ್ಜಿತ ಸ್ಟೇಡಿಯಂ ನಿರ್ಮಾಣವಾಗಲಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಸ್ಟೇಡಿಯಂ ನಿರ್ಮಾಣವಾದರೆ, ಇದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಪರ್ಯಾಯವಾಗಲಿದೆ.

ಕರ್ನಾಟಕಕ್ಕೆ ಎರಡನೇ ಕ್ರಿಕೆಟ್‌ ಸ್ಟೇಡಿಯಂ

ಭಾರತದಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ಟೇಡಿಯಂಗಳಿವೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನವಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಸ್ಟೇಡಿಯಂಗಳಿವೆ. ಅದರಲ್ಲಿ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ ಪ್ರಮುಖವು. ದಕ್ಷಿಣ ಭಾರತದ ದೊಡ್ಡ ರಾಜ್ಯವಾಗಿರುವ ಕರ್ನಾಟಕಕ್ಕೂ ಎರಡನೇ ಸ್ಟೇಡಿಯಂ ಅಗತ್ಯವಿದೆ.

Leave a Reply

Your email address will not be published. Required fields are marked *