ಪೂಜಾ ಕಾರ್ಯಗಳಿಂದ ಹಿಡಿದು ತರಹೇವಾರಿ ಅಡುಗೆಯವರೆಗೆ ಹಸಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಇದರಿಂದ ತಯಾರಿಸಿದಂತಹ ಬಗೆಬಗೆಯ ಖಾದ್ಯ, ಭಕ್ಷ್ಯಗಳನ್ನು ನೀವು ಸಹ ಸವಿದಿರುತ್ತೀರಿ ಅಲ್ವಾ. ಆದ್ರೆ ಈ ಹಸಿ ತೆಂಗಿನಕಾಯಿ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ, ಇದನ್ನು ತಿನ್ನುವುದರಿಂದ ಲಭಿಸುವ ಪ್ರಯೋಜನಗಳಾದರೂ ಏನು ಎಂಬುದನ್ನು ತಿಳಿಯಿರಿ.
ವಿವಿಧ ಭಕ್ಷ್ಯ, ಖಾದ್ಯಗಳ ತಯಾರಿಯಿಂದ ಹಿಡಿದು ಪೂಜಾ ಕಾರ್ಯಗಳವರೆಗೆ ಬಹುಪಯೋಗಿಯಾಗಿರುವ ತಾಜಾ ತೆಂಗಿನಕಾಯಿ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಮಾಹಿತಿಯನ್ನು ಡಾ. ಸುನೀತಾ ಸಾಯಮ್ಮಗಾರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಅವರು ಹೇಳುವಂತೆ, ಇದರ ಪೌಷ್ಠಿಕಾಂಶದ ಬಗ್ಗೆ ನೋಡುವುದಾದರೆ, 100 ಗ್ರಾಂ ತಾಜಾ ತೆಂಗಿನಕಾಯಿಯಲ್ಲಿ 354 ಕ್ಯಾಲೋರಿ, 15 ಗ್ರಾಂ ಕಾರ್ಬೋಹೈಡ್ರೇಟ್, 9 ಗ್ರಾಂ ಫೈಬರ್ 9, ಪ್ರೋಟೀನ್ 3.3 ಗ್ರಾಂ (100 ಮಿಲಿ ಲಿ ಹಾಲಿಗೆ ಸಮ), ಕೊಬ್ಬು 33 ಗ್ರಾಂ ಮತ್ತು ಮೀಡಿಯಂ ಚೈನ್ ಟ್ರೈಗ್ಲಿಸರೈಡ್ (MTC) 30 ಗ್ರಾಂ ಇದೆ. ಈ MCT ಕೊಬ್ಬು ನಷ್ಟ ಮತ್ತು ತೂಕ ನಷ್ಟಕ್ಕೆ ಸಹಕಾರಿ ಎಂಬುದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದು ಬಂದಿದೆ ಎಂಬುದನ್ನು ಅವರು ಹೇಳಿದ್ದಾರೆ. ಇನ್ನೂ ತಾಜಾ ತೆಂಗಿನಕಾಯಿಯಲ್ಲಿ ಖನಿಜಗಳು ಮತ್ತು ಜೀವಸತ್ವಗಳು ಎಷ್ಟಿದೆ ಎಂಬುದನ್ನು ನೋಡುವುದುದಾರೆ, ತಾಜಾ ತೆಂಗಿನಕಾಯಿಯಲ್ಲಿ ತಾಮ್ರ, ಸೆಲೆನಿಯಮ್, ಸತು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಇದೆ. ಇನ್ನೂ ವಿಟಮಿನ್ ಬಿ 12, 2, 3, 6, 9 ಮತ್ತು ವಿಟಮಿನ್ ಸಿ ಮತ್ತು ಇ ಕೂಡ ಇದೆ.
ಇಷ್ಟೆಲ್ಲಾ ಪೋಷಕಾಂಶಗಳಿಂದ ಕೂಡಿರುವ ತಾಜಾ ತೆಂಗಿನಕಾಯಿಯನ್ನು ಸೇವನೆ ಮಾಡುವುದು ಉತ್ತಮ. ಆದರೆ, ಇದನ್ನು ದಿನಕ್ಕೆ 100 ಗ್ರಾಂ ಸೇವಿಸುವ ಬದಲು ದಿನಕ್ಕೆ 30 ರಿಂದ 40 ಗ್ರಾಂ ಸೇವಿಸಬೇಕು. ಊಟದ ಭಾಗವಾಗಿ ಅಥವಾ ತಿಂಡಿಯ ರೂಪದಲ್ಲೂ ಇದನ್ನು ಸೇವನೆ ಮಾಡಬಹುದು. ಇದರ ಸೇವನೆ ಹೊಟ್ಟೆಗೆ ತೃಪ್ತಿಯನ್ನು ನೀಡುವುದು ಮಾತ್ರವಲ್ಲದೆ, ಇದು ಜಂಕ್ ಫುಡ್ ಹಾಗೂ ಹೆಚ್ಚಿನ ಕಾರ್ಬ್ ಆಹಾರಗಳ ಅತಿಯಾದ ಸೇವನೆಯನ್ನು ಕೂಡಾ ತಪ್ಪಿಸುತ್ತದೆ ಎಂದು ಅವರು ಹೇಳಿದ್ದಾರೆ.