ತಾಯಿಯ ಪ್ರೀತಿಯ ಹಾಗೇ, ಮಕ್ಕಳ ಆರೈಕೆಯಲ್ಲೇ ಖುಷಿ ಕಾಣುವ ಜೀವವದು. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ, ಹೌದು, ಈ ಪ್ರಾಣಿಗಳು ಕೂಡ ತನ್ನ ಕಂದಮ್ಮನನ್ನು ಕಾಳಜಿ ವಹಿಸುತ್ತಾ, ಸುರಕ್ಷಿತವಾಗಿ ನೋಡಿಕೊಳ್ಳುತ್ತವೆ. ಇದೀಗ ತಾಯಿ ಆನೆಯೊಂದು ತಮ್ಮ ಕಂದಮ್ಮನಿಗೆ ಸ್ನಾನ ಮಾಡಿಸಿದ್ದು, ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

ಪ್ರತಿಯೊಬ್ಬ ತಾಯಿಯು ಮಗುವಿನ ಲಾಲನೆ ಪಾಲನೆಯಲ್ಲಿ ತನ್ನ ಖುಷಿಯನ್ನು ಕಾಣುತ್ತಾಳೆ. ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಆಕೆಯ ದಿನನಿತ್ಯ ರೂಟೀನ್ ಆಗಿರುತ್ತದೆ. ಆದರೆ ಪ್ರಾಣಿಗಳು ಆಗಲ್ಲ, ಬೆಳೆಯುತ್ತ ಹೋದಂತೆ ತಮ್ಮ ಪಾಡಿಗೆ ಎಲ್ಲವನ್ನು ಕಲಿತುಕೊಂಡು ಬಿಡುತ್ತವೆ. ಆದರೆ ಕೆಲವೊಮ್ಮೆ ಈ ಪ್ರಾಣಿಗಳು ತಮ್ಮ ಕಂದಮ್ಮಗಳಿಗೆ ಆಹಾರ ತಂದು ಕೊಡುವುದು, ಪ್ರೀತಿಯಿಂದ ಮುದ್ದಿಸುವುದನ್ನು ಮಾಡುತ್ತವೆ. ಆದರೆ ನೀವು ತಾಯಿ ಆನೆಯು ಮರಿಯಾನೆಗೆ ಸ್ನಾನ ಮಾಡಿಸುವುದನ್ನು ಎಂದಾದ್ರೂ ನೋಡಿದ್ದೀರಾ. ಆದರೆ ಇಲ್ಲೊಂದು ಅಪರೂಪದ ವಿಡಿಯೋವನ್ನು ವೈರಲ್ ಆಗಿದೆ. ತಾಯಿ ಆನೆಯೂ ತನ್ನ ಮುಂಭಾಗದಲ್ಲಿ ಕುಳಿತುಕೊಂಡ ಮರಿಯಾನೆಗೆ ಸ್ನಾನ ಮಾಡಿಸಿದ್ದುಈ ದೃಶ್ಯವೂ ಎಲ್ಲರ ಗಮನ ಸೆಳೆದಿದೆ.
elephantsofworld ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋದಲ್ಲಿ ತಾಯಾನೆಯು ಮರಿಯಾನೆ ನಡುವಿನ ಬಾಂಧವ್ಯವನ್ನು ಕಾಣಬಹುದು. ಈ ವಿಡಿಯೋಗೆ ಅಮ್ಮ ಇದ್ದಲ್ಲಿ ಪ್ರತಿಯೊಂದು ಚೆನ್ನಾಗಿರುತ್ತದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಆನೆಯೊಂದು ತನ್ನ ಎರಡು ಕಾಲುಗಳನ್ನು ನೆಲಕ್ಕೆ ಊರಿ ಕುಳಿತುಕೊಂಡಿದೆ. ಎರಡು ಕಾಲುಗಳ ನಡುವೆ ಮುದ್ದು ಕಂದಮ್ಮನನ್ನು ಕೂರಿಸಿಕೊಂಡಿದೆ. ಪೈಪ್ನಿಂದು ವ್ಯಕ್ತಿಯೊಬ್ಬರು ನೀರು ಹಾಕುತ್ತಿದ್ದು, ತಾಯಾನೆ ತನ್ನ ಸೊಂಡಿಲಿನಿಂದ ನೀರನ್ನು ಹಿಡಿದು ಮರಿಯಾನೆಯ ಮುಖ ಹಾಗೂ ತಲೆಗೆ ಹಾಕುತ್ತಿದೆ. ತನ್ನ ಸೊಂಡಿಲಿನಿಂದ ಕಂದಮ್ಮನ ಮುಖವನ್ನು ಉಜ್ಜುತ್ತಾ ಸ್ನಾನ ಮಾಡಿಸುತ್ತಿದೆ. ಮೈ ಮೇಲೆ ತಣ್ಣನೆಯ ನೀರು ಬೀಳುತ್ತಿದ್ದಂತೆ ಮರಿಯಾನೆಯು ಓಡಲು ಮುಂದಾಗಿರುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ 2.1 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ತಾಯಿ ಹಾಗೂ ಮಗುವಿನ ನಡುವಿನ ಪರಿಶುದ್ಧವಾದ ಪ್ರೀತಿ ಅಂದ್ರೆ ಇದೇ ನೋಡಿ ಎಂದಿದ್ದಾರೆ. ಇನ್ನೊಬ್ಬರು, ತುಂಬಾನೇ ಸುಂದರವಾಗಿದೆ. ನನಗೆ ಇಂತಹ ವಿಡಿಯೋಗಳನ್ನು ನೋಡುವುದೆಂದರೆ ಇಷ್ಟ. ನಾನು ದಿನವಿಡಿ ಈ ವಿಡಿಯೋಗಳನ್ನು ನೋಡುವುದರಲ್ಲೇ ಕಳೆಯುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ತಾಯಿ ತನ್ನ ಮಗುವಿಗಾಗಿ ಎಲ್ಲವನ್ನು ಪ್ರೀತಿಯಿಂದಲೇ ಮಾಡುತ್ತಾಳೆ ಎಂದು ಕಾಮೆಂಟ್ನಲ್ಲಿ ಹೇಳಿದ್ದಾರೆ.