ತುಮಕೂರು:- ಜಿಲ್ಲೆಯಲ್ಲಿ ಲಾಂಗು- ಮಚ್ಚಿನಿಂದ ಹಲ್ಲೆ ಮಾಡುವ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಲ್ಪತರು ನಾಡು ಈಗ ಕ್ರೈಂ ಸಿಟಿಯಾಗುತ್ತಿದೆ.
ಸ್ಮಾರ್ಟ್ ಸಿಟಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆ ಯುವಕರಿಂದ ಲಾಂಗು-ಮಚ್ಚುಗಳು ಝಳಪಿಸುತ್ತಿದ್ದು, ಜನರಲ್ಲಿ ದಿನೇ ದಿನೇ ಭಯದ ವಾತಾವರಣ ಹೆಚ್ಚಾಗುತ್ತಿದೆ.
ಪುಂಡ-ಪೋಕರಿಗಳಿಗೆ ಭಯವಿಲ್ಲ:- ನಗರದಲ್ಲಿ ಪುಂಡಪೋಕರಿಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ. ಅದರಲ್ಲೂ ಸದಾಶಿವ ನಗರ ಮರಳೂರುದಿಣ್ಣೆ ಕಡೆ ಪುಂಡರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಹುಡುಗಿ ವಿಚಾರವಾಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಮತ್ತೆ ಅಂತಹದ್ದೆ ಘಟನೆಯೊಂದು ನಡೆದಿದೆ. ಹೀಗಾಗಿ ಈ ಭಾಗದಲ್ಲಿ ಜನ ಈಗ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಹುಡುಗಿ ವಿಚಾರಕ್ಕೆ ಸಮೋಸ ಅಂಗಡಿಗೆ ನುಗ್ಗಿ ಹಲ್ಲೆ: ಹುಡುಗಿ ವಿಚಾರವಾಗಿಯೇ ಸದಾಶಿವನಗರದಲ್ಲಿನ ಸಮೋಸ ಸೆಂಟರ್ಗೆ ನುಗ್ಗಿ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಶನಿವಾರ ನಡೆದಿದೆ. 22 ವರ್ಷದ ಹಸೇನ್ ಎನ್ನುವವನು, ಇಸ್ಮಾಯಿಲ್ ನಗರದ ಆಯುಬ್ ಎಂಬುವನ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಆಯುಬ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಲಾಂಗಿನಲ್ಲಿ ಕೇಕ್ ಕಟ್ ಮಾಡಿದ್ದರು:- ಇನ್ನು ಕಳೆದ 20 ದಿನಗಳ ಹಿಂದೆ ಗುಬ್ಬಿ ಪಟ್ಟಣದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿಯಾಗಿ ತಲ್ವಾರ್ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪ್ರಕರಣ ಕೂಡ ನಡೆದಿತ್ತು. ಜನರಲ್ಲಿ ಭಯ ಮೂಡಿಸುವ ರೀತಿಯಲ್ಲಿ ಹಬ್ಬ ಆಚರಿಸಿಕೊಂಡಿದ್ದ ಸೈಯದ್ ಶರೂಖ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಗುಬ್ಬಿ ಸಂತೇ ಮೈದಾನದಲ್ಲಿ ರಾತ್ರಿಯ ವೇಳೆ ಸುಮಾರು 10.30ರ ಸಮಯದಲ್ಲಿ ಸೈಯದ್ ಶರೂಖ್ ಮತ್ತು ಮುಕೀಶ್ ಪಾಷ್ ತಲ್ವಾರ್ಗಳನ್ನು ತೋರಿಸಿ ವಿಚಿತ್ರವಾಗಿ ಜನರಲ್ಲಿ ಭಯ ಮೂಡಿಸಿದ್ದ ವೀಡಿಯೋ ವೈರಲ್ ಆಗಿದ್ದ ಬೆನ್ನಹಿಂದಲೇ ಪೊಲೀಸರು ಕ್ರಮಕೈಗೊಂಡಿದ್ದರು. ವಿಚಿತ್ರವಾಗಿ ಜನರಿಗೆ ಭಯ ಹುಟ್ಟುವ ರೀತಿಯಲ್ಲಿ ಜನರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಲ್ವಾರ್ ತೆಗೆದುಕೊಂಡು ರಸ್ತೆಗೆ ಅಡ್ಡಲಾಗಿ ತಲ್ವಾರ್ ನಿಂದ ಸೈಯದ್ ಶರೂಖ್ ಕಿರುಚಿ, ಜೋರಾಗಿ ಚೀರಾಡಿಕೊಂಡು ಕೇಕ್ ಕತ್ತರಿಸಿದ್ದ ದೃಶ್ಯ ವೈರಲ್ ಆಗಿತ್ತು.
ನಗರದ ಜನರಲ್ಲಿ ಹೆಚ್ಚಿದ ಭೀತಿ
ಇತ್ತಿಚೆಗೆ ಹುಡುಗಿ ವಿಚಾರಕ್ಕೆನೇ ಅದೇ ಸದಾಶಿವನಗರ ರಸ್ತೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹುಡುಗಿಯನ್ನು ಚುಡಾಯಿಸುತ್ತಿದ್ದ ವೇಳೆ ಆಕೆಯ ರಕ್ಷಣೆಗೆ ಹೋಗಿದ್ದ ಯುವಕರ ಮೇಲೆ ಚುಡಾಯಿಸುತ್ತಿದ್ದ ಯುವಕರ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಮೇಲಿಂದ ಮೇಲೆ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದರಿಂದ ನಗರದ ಜನರಲ್ಲಿ ಭೀತಿ ಹೆಚ್ಚಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ನಗರದಲ್ಲಿ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಸಮರ್ಪಕವಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ತುಮಕೂರು ನಗರದಲ್ಲಿ ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆಗಳು ನಡೆದಿದೆ.