ಬ್ರಿಟೀಷ್ ನಾಮಫಲಕಗಳ ವಿರುದ್ಧ ಕರವೇ ಸಮರ : ಕನ್ನಡ ಕಡ್ಡಾಯಗೊಳಿಸಲು ಪ್ರತಿಭಟನೆ

ಬ್ರಿಟೀಷ್ ನಾಮಫಲಕಗಳ ವಿರುದ್ಧ ಕರವೇ ಸಮರ : ಕನ್ನಡ ಕಡ್ಡಾಯಗೊಳಿಸಲು ಪ್ರತಿಭಟನೆ

ಬೆಳಗಾವಿ : ಆಂಗ್ಲ ಭಾಷಾ ನಾಮಫಲಕಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಮರ ಸಾರಿದ್ದು, ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲನೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿತು. ಈ ವೇಳೆ, ಪಾಲಿಕೆ ಮುಂಭಾಗದ ರಸ್ತೆ ತಡೆದು ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ನಾಮಫಲಕಗಳು, ಜಾಹೀರಾತು ಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಒತ್ತಾಯಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ‘ಸರ್ಕಾರದ ಆದೇಶವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಪಾಲಿಸುತ್ತಿಲ್ಲ. ಜಾಹೀರಾತು ಫಲಕದಲ್ಲಿ ಕನ್ನಡ ಭಾಷೆ ಇಲ್ಲದಿದ್ದರೂ ಪಾಲಿಕೆಯಿಂದ ಅನುಮತಿ ಕೊಡಲಾಗುತ್ತಿದೆ. ಇದಕ್ಕೆ ಕೆಲ ಅಧಿಕಾರಿಗಳು ಪುಷ್ಠಿ ನೀಡುತ್ತಿದ್ದು, ಅಂಥ ಕನ್ನಡ ವಿರೋಧಿ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು. ನ.1ರೊಳಗೆ ಬೆಳಗಾವಿ ನಗರದಲ್ಲಿ ಎಲ್ಲಾ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಬೇಕು’ ಎಂದು ಗಡುವು ನೀಡಿದರು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಹಾನಗರ, ‘ಕಂದಾಯ ಮತ್ತು ಆರೋಗ್ಯ ವಿಭಾಗವಾರು ತಂಡಗಳನ್ನು ರಚಿಸಿ, ಎಲ್ಲೆಲ್ಲಿ ಶೇ.60ರಷ್ಟು ಕನ್ನಡ ಫಲಕಗಳು ಇಲ್ಲವೋ, ಅವುಗಳನ್ನು ತೆಗೆದು ಹಾಕಲಾಗುವುದು. ಅಲ್ಲದೇ ವಿಶೇಷ ಆಂದೋಲನ ಕೂಡ ನಡೆಸುತ್ತೇವೆ ಎಂದರು.  

ಪ್ರತಿಭಟನೆಯಲ್ಲಿ  ಮುಖಂಡರಾದ ಸತೀಶ್ ಗುಡನ್ನವರ್, ಬಾಳು ಜಡಗಿ, ರಮೇಶ್ ಯರಗನ್ನವರ್, ಮಂಜುನಾಥ ರಾಠೋಡ್, ನಿಂಗರಾಜ ಗುಂಡ್ಯಾಗೋಳ, ಹೊಳೆಪ್ಪ ಸುಲಧಾಳ ಸೇರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *