ಶಿರಾ: ಇಂದಿನ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಅಂದರೆ ಸುಸಜ್ಜಿತವಾದ ಶಾಲಾ ಕೊಠಡಿಗಳಿದ್ದರೂ ಮಕ್ಕಳ ಹಾಜರಾತಿಯೇ ಕಡಿಮೆ ಇರುತ್ತದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಹಾಜರಾತಿ ಹೆಚ್ಚಿದ್ದರೂ ಹಳೆಯ ಶಿಥಿಲ ಕಟ್ಟಡ ಮಕ್ಕಳಿಗೆ ಜೀವ ಭಯವನ್ನುಂಟು ಮಾಡುತ್ತಿದೆ.
ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕರೇಮಾದೇನಹಳ್ಳಿ ಸರ್ಕಾರಿ ಹಿ. ಪ್ರಾ. ಪಾಠಶಾಲೆಯಲ್ಲಿ ಸುಮಾರು 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಉತ್ತಮ ಪಾಠ ಪ್ರವಚನಗಳೂ ನಡೆಯುತ್ತಿವೆಯಾದರೂ ಕಳೆದ ಸುಮಾರು 50 ವರ್ಷಗಳ ಹಳೆಯ ಶಾಲಾ ಕಟ್ಟಡದಲ್ಲಿ ಕೂತು ಪಾಠ ಕೇಳುವ ಮಕ್ಕಳು ಮತ್ತು ಶಿಕ್ಷಕರಲ್ಲಿ ಜೀವ ಭಯವಂತೂ ಕಾಡುತ್ತಲೇ ಇದೆ.
1 ರಿಂದ 7 ನೆ ತರಗತಿಯವರೆಗಿರುವ ಸದರಿ ಶಾಲೆಯಲ್ಲಿ ಕೇವಲ 2 ಕೊಠಡಿಗಳು ಮಾತ್ರಯಿವೆ. ಈ ಸಂಬಂಧ ಇಲ್ಲಿನ ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡಿಸುವಂತೆ ಕ್ಷೇತ್ರ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳ ಬೆನ್ನು ಹತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸದರಿ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡಿಸಿ, ಹಳೆಯ ಕಟ್ಟಡ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.