2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಸಮಾಜ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 10ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಶಿಷ್ಟ ಜಾತಿಯವರನ್ನು ಆರ್ಥಿಕವಾಗಿ ಸದೃಢ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ, ಭೂ ಒಡೆತನ ಯೋಜನೆಯೂ ಕೆಲವು. ಈ ಯೋಜನೆಗಳ ಲಾಭ ಪಡೆದು ಪರಿಶಿಷ್ಟ ಜಾತಿಯವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ ಎನ್ನುವುದು ಸರ್ಕಾರದ ಉದ್ದೇಶ. ಹೀಗಾಗಿ 2024-25ನೇ ಸಾಲಿನಲ್ಲಿ ಈ ಯೋಜನೆಗಳ ಲಾಭ ಪಡೆಯಲು ಸರ್ಕಾರ ಅರ್ಜಿ ಆಹ್ವಾನಿಸಿದೆ.
ಎಸ್ ಸಿ ಕಲ್ಯಾಣ ಯೋಜನೆಗಳ ವಿವರಗಳು ಇಂತಿವೆ :
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ಈ ಯೋಜನೆಯಡಿ ಬ್ಯಾಂಕ್ ಗಳ ಸಹಯೋಗದೊಂದಿಗೆ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.
ಬ್ಯಾಂಕ್ ಸಾಲದ ಶೇ.20ರಷ್ಟು ಅಥವಾ ಗರಿಷ್ಠ 1 ಲಕ್ಷ ರೂ. ಸಹಾಯಧನ
ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಠ 2 ಲಕ್ಷ ರೂ. ಸಹಾಯಧನ
ಸರಕು ವಾಹನ ಅಥವಾ ಬಾಡಿಗೆ ಟ್ಯಾಕ್ಸಿ ಖರೀದಿಸುವ ಉದ್ದೇಶಕ್ಕೆ, ಸಾಲದ ಮೊತ್ತದ ಶೇ.75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂ. ಸಹಾಯಧನ
ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು
ಈ ಯೋಜನೆಯಡಿ 50 ಸಾವಿರ ರೂ. ಸಹಾಯಧನ ಹಾಗೂ ಶೇ.4ರ ಬಡ್ಡಿದರದಲ್ಲಿ 50 ಸಾವಿರ ರೂ. ಸಾಲಸೌಲಭ್ಯ ಸಿಗಲಿದೆ.
ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ:
ಕನಿಷ್ಠ 10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ 1.50 ಲಕ್ಷ ರೂ. ಸಹಾಯಧನ ಹಾಗೂ ಶೇ.4ರ ಬಡ್ಡಿದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲಸೌಲಭ್ಯ ಸಿಗಲಿದೆ.
ಭೂ ಒಡೆತನ ಯೋಜನೆ:
ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿಗೆ ಸಹಾಯಧನ ಮತ್ತು ಶೇ.6ರ ಬಡ್ಡಿದರದಲ್ಲಿ ಸಾಲಸೌಲಭ್ಯ ಸಿಗಲಿದೆ.
ಗಂಗಾ ಕಲ್ಯಾಣ ಯೋಜನೆ:
1.20-5 ಎಕರೆ ಜಮೀನು ಹೊಂದಿರುವ ಸಣ್ಣ, ಅತಿಸಣ್ಣ ರೈತರಿಗೆ ಕೊಳವೆಬಾವಿ, ಪಂಪ್ ಸೆಟ್, ವಿದ್ಯುತ್ ಸೇರಿ ನೀರಾವರಿ ಸೌಲಭ್ಯ ಸಿಗಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ:
ಈ ಯೋಜನೆಗಳ ಲಾಭ ಪಡೆಯಲು ಸರ್ಕಾರ ಅರ್ಜಿ ಆಹ್ವಾನಿಸಿದೆ. ಯೋಜನೆಗಳ ಲಾಭ ಪಡೆಯಲು ಬಯಸುವವರು ಅಕ್ಟೋಬರ್ 10, 2024ರೊಳಗೆ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 2023-24ನೇ ಸಾಲಿನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಆಸಕ್ತರು https://sevasindhu.karnataka.gov.inನಲ್ಲಿ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ, ಎಸ್.ಟಿ ಸಹಾಯವಾಣಿ ಸಂಖ್ಯೆ 9482300400 ಸಂಪರ್ಕಿಸಬಹುದು.