ಕಾರವಾರ: ವೃಕ್ಷಮಾತೆ ಎಂದೇ ಹೆಸರುವಾಸಿಯಾದ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ತುಳಸಿ ಗೌಡ ಅವರು ಸೋಮವಾರ ಅನಾರೋಗ್ಯದಿಂದ 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಇಳಿ ವಯಸ್ಸಿನಲ್ಲಿಯೂ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ತುಳಸಿ ಗೌಡ, ಸಾಲು ಸಾಲು ಗಿಡ ನೆಟ್ಟು ಪೋಷಿಸಿದ ಹಿರಿಮೆ ಇವರಿಗಿದೆ. ಪರಿಸರ ಕಾಳಜಿಯಿಂದಾಗಿ 2020 ರಲ್ಲಿ ಈ ವೃಕ್ಷಮಾತೆ ತುಳಸಿ ಗೌಡ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.
ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ ಮಹಾತಾಯಿ ತುಳಸಿ ಗೌಡ ಇಹಲೋಕ ತ್ಯಜಿಸಿದ್ದಾರೆ. ಇನ್ನು ಈ ಕಾಲದಲ್ಲಿ ಈಕೆಯನ್ನು ನಿಜವಾದ ಪರಿಸರ ಪ್ರೇಮಿ ಎಂದೇ ಕರೆಯಬಹುದು.
ಹಾಲಕ್ಕಿ ಸಮುದಾಯದಲ್ಲಿ ಜನಿಸಿದ ತುಳಸಿ ಗೌಡ, ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದ ಮತ್ತೋರ್ವ ಮಹಿಳಾ ಸಾಧಕಿಯಾಗಿದ್ದರು. ಬಡಕುಟುಂಬದಲ್ಲಿ ಜನಿಸಿದ ಈ ವೃಕ್ಷಮಾತೆ ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅಲ್ಲದೇ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದರೂ ಈಗಲೂ ಅಲ್ಲಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಾರೆ. ಇನ್ನು ತುಳಸಿ ಗೌಡ ಕಳೆದ ಆರು ದಶಕಗಳಿಂದ ಈ ಕೆಲಸವನ್ನು ಯಾವುದೇ ಪ್ರತಿಫಲ, ನಿರೀಕ್ಷೆ ಇಲ್ಲದೆ ಸೇವೆ ಮಾಡುತ್ತಿದ್ದರು.
ಸ್ಥಳೀಯರು ಹೇಳುವಂತೆ ತುಳಸಿ ಅವರು, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರOತೆ. ಅವರ ಈ ಸೇವೆಯನ್ನು ಗುರುತಿಸಿ, ಅವರ ಸೇವೆಯನ್ನು ಪರ್ಮನೆಂಟ್ ಮಾಡಿತು. 14 ವರ್ಷಗಳ ನಂತರ, ಅವರು ಸೇವೆಯಿಂದ ನಿವೃತ್ತರಾದರು.