ಬೆಂಗಳೂರು : ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು 27ನೇ ಜೂನ್ 2025ರ ಆಚರಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಮಟ್ಟದ ಕಾರ್ಯಕ್ರಮವನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಕೆಂಪೇಗೌಡರ ಆಡಳಿತ, ನಿಮ್ಮ ‘ಜನಪರ ಸರ್ಕಾರ’ಕ್ಕೆ ಆದರ್ಶ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು, ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದ್ದು, ಜೂನ್ 27ರಂದು ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಬನ್ನಿ, ಧರ್ಮವೀರ ಕೆಂಪೇಗೌಡರಿಗೆ ನಾವೆಲ್ಲರೂ ಸೇರಿ ಗೌರವವನ್ನು ಸಲ್ಲಿಸೋಣ, ಅವರ ಕೊಡುಗೆಗಳನ್ನು ಸ್ಮರಿಸೋಣ ಎಂದಿದ್ದಾರೆ.

7 ಸ್ಥಳಗಳಿಂದ ಪುರ ಜ್ಯೋತಿಗಳು: ಕೆಂಪೇಗೌಡರ ಜಯಂತಿಯ ದಿನ ಬೆಳಗ್ಗೆ 7ಗಂಟೆಗೆ ನಗರದ ನಾಲ್ಕು ದಿಕ್ಕುಗಳಲ್ಲಿರುವ ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನಲ್ಲಿರುವ ಆವತಿ ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ತರಿ ದುರ್ಗ ಸೇರಿದಂತೆ ಒಟ್ಟು 7 ಸ್ಥಳಗಳಿಂದ ಸಚಿವರುಗಳ ನೇತೃತ್ವದಲ್ಲಿ ಪುರ ಜ್ಯೋತಿಗಳು ಹೊರಟು, ಸುಮ್ಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ(ಮಾಗಡಿ ರಸ್ತೆ)ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ 7 ಪುರ ಜ್ಯೋತಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.