ಕೋಲಾರ: ಮದುವೆಯಾದ ರಾತ್ರಿಯೇ ನವವಿವಾಹಿತ ಯುವಕನೋರ್ವ ದುರಂತ ಸಾವು ಕಂಡಿದ್ದಾನೆ. ನಿನ್ನೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವಕ ಹರೀಶ್ ಬಾಬು ರಾತ್ರಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು, ನಿನ್ನೆ ರಾತ್ರಿಯೇ ಜಿಲ್ಲಾಸ್ಪತ್ರೆಯ ಇ.ಎನ್.ಟಿ ವಿಭಾಗದ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆ ಕಟ್ಟಿ ಬಳಿಕ ಪ್ರೀತಿಸಿದ ಹುಡುಗಿಯೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಸುಂದರ ಜೀವನ ಕಟ್ಟಿಕೊಳ್ಳಬೇಕೆಂದು ಕನಸು ಕಂಡಿದ್ದ. ಆದ್ರೆ, ಏಕಾಏಕಿ ಮದುವೆ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿದೆ.

ಜಿಲ್ಲಾಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಕೋಲಾರದ ಗಾಂಧಿನಗರ ಮೂಲದ ಯುವತಿ ಹಾಗೂ ಹರೀಶ್ ಬಾಬು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯವರಿಗೂ ಗೊತ್ತಿತ್ತು. ಆದ್ರೆ, ಮನೆ ಕಟ್ಟಿ ಬಳಿಕ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ. ಆದ್ರೆ, ಅದೇನಾಯ್ತೋ ಏನೋ ಏಕಾಏಕಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಮಾಡಲಾಗಿದೆ. ಆದ್ರೆ, ಮದುವೆಯಾದ ರಾತ್ರಿಯೇ ಹರೀಶ್ ಬಾಬು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾತ್ರಿ ವೇಳೆ ಜಿಲ್ಲಾಸ್ಪತ್ರೆಯಲ್ಲಿನ ಇ.ಎನ್.ಟಿ ವಿಭಾಗದ ಕೊಠಡಿಯೊಂದಕ್ಕೆ ಆಗಮಿಸಿ ಮದ್ಯ ಸೇವಿಸಿದ್ದಾನೆ. ನಂತರ ಅಲ್ಲೇ ಆಸ್ಪತ್ರೆಯಲ್ಲಿದ್ದ ಬ್ಯಾಂಡೇಜ್ ಬಟ್ಟೆಯಿಂದ ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡಿದ್ದಾನೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದ ಸುರೇಶ್ ಬಾಬು ಕಳೆದ ರಾತ್ರಿ ಆಸ್ಪತ್ರೆಗೆ ಬಂದು ಸಾವಿಗೆ ಶರಣಾಗಿದ್ದಾನೆ. ಇನ್ನು ಸಾವಿಗೂ ಮುನ್ನ ಮದ್ಯ ಸೇವಿಸಿ ತನ್ನ ಬಳಿ ಇದ್ದ ಮೊಬೈಲ್ ಪೋನ್ ಸಿಮ್ ಕಾರ್ಡ್ ಮುರಿದು ಹಾಕಿದ್ದಾನೆ.
ಇನ್ನು ಇಂದು ಬೆಳಿಗ್ಗೆ ಎಂದಿನಂತೆ ಜಿಲ್ಲಾಸ್ಪತ್ರೆಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ಹರಿಶ್ ಬಾಬು ನೇಣಿಗೆ ಶರಣಾಗಿರುವುದು ಬೆಳಕಿಗದೆ ಬಂದಿದೆ. ಸದ್ಯ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಕೋಲಾರ ನಗರ ಠಾಣೆಗೆ ದೂರು ನೀಡಿದ್ದು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದಾರೆ.
