ಕೊಪ್ಪಳ || ಯಾವುದೇ ವರದಿ ನಕಲಿ ಅಲ್ಲ, ಬಿಜೆಪಿ ನವರೆ ನಕಲಿ : ಸಚಿವ

ಕೊಪ್ಪಳ || ಯಾವುದೇ ವರದಿ ನಕಲಿ ಅಲ್ಲ, ಬಿಜೆಪಿ ನವರೆ ನಕಲಿ : ಸಚಿವ

ಕೊಪ್ಪಳ: “ಯಾವುದೇ ವರದಿ ನಕಲಿ ಅಲ್ಲ. ಈ ಹಿಂದೆ ಪಂಚಮಸಾಲಿಗಳಿಗೆ 2ಡಿ, 2ಸಿ ನೀಡಿದ್ದು ಯಾವ ವರದಿ ಆಧಾರದ ಮೇಲೆ?, ಸಚಿವ ಸಂಪುಟ ಸಭೆಯಲ್ಲಿ ಯಾರೂ ವಿರೋಧ ಮಾಡಿಲ್ಲ. ಕೇವಲ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ. ಈಗ ಮಂಡಿಸಿದ ವರದಿ ನಕಲಿ ಎನ್ನುವ ಬಿಜೆಪಿಯವರೇ ನಕಲಿಗಳು” ಎಂದು ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದ್ದಾರೆ.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಜಾತಿ ಗಣತಿ ವರದಿಯನ್ನು ಅಧ್ಯಯನ ಮಾಡಲು ಲಿಂಗಾಯತ, ಒಕ್ಕಲಿಗ ಸಚಿವರು ಕೇಳಿದ್ದಾರೆ. ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ. 50 ಸಂಪುಟವಿದೆ. ಸದ್ಯ ಅದರ ಹೈಲೈಟ್ಸ್ ನೀಡಲಾಗಿದೆ. ಶಾಸಕರಿಗೂ ವರದಿ ನೀಡಲಾಗುವುದು. ಈ ಕುರಿತು ಸಮಗ್ರವಾಗಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದರು.

ಬಿಜೆಪಿಯ ಜನಾಕ್ರೋಶ ಯಾತ್ರೆ ಕುರಿತು ಪ್ರತ್ರಿಕಿಯಿಸಿದ ಅವರು, “ಬಿಜೆಪಿಯವರು ಕೊಪ್ಪಳದಲ್ಲಿ ಯಾತ್ರೆ ಮಾಡಬೇಡಿ, ದೆಹಲಿಗೆ ಹೋಗಿ ಜನಾಕ್ರೋಶ ವ್ಯಕ್ತಪಡಿಸಿ. ಏಕೆಂದರೆ, ಈ ದೇಶದಲ್ಲಿ ಬೆಲೆ ಏರಿಕೆಗೆ ಕಾರಣ ಬಿಜೆಪಿ. ಅವರಿಗೆ ಮಾಡಲು ಸದ್ಯ ಏನೂ ಕೆಲಸವಿಲ್ಲ. ಕೇಂದ್ರದ ತೈಲ ಬೆಲೆ ಏರಿಕೆಯಿಂದಾಗಿ ಎಲ್ಲಾ ಬೆಲೆಗಳು ಏರಿಕೆಯಾಗಿವೆ” ಎಂದರು.

ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಿಲ್ಲ: “ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗುತ್ತಿಗೆದಾರರು ಭ್ರಷ್ಟಾಚಾರದ ಆರೋಪ ಮಾಡಿದ ನಂತರ ಸಿಎಂ ಭೇಟಿಯಾಗಿ ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಬಿಜೆಪಿಯವರು ಕೊರೊನಾದಲ್ಲಿಯೂ ಹಣ ಹೊಡೆದಿದ್ದಾರೆ. ಹೆಣದ ಮೇಲೆ ಹಣ ಮಾಡಿದ ಅವರ ಮಟ್ಟಕ್ಕೆ ನಾವು ಹೋಗಿಲ್ಲ” ಎಂದು ಹೇಳಿದರು.

ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ: “ಕೊಪ್ಪಳ ಬಳಿ ಉಕ್ಕು ಕಾರ್ಖಾನೆ ಸ್ಥಾಪನೆಯ ಬಗ್ಗೆ ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ. ಮತ್ತೊಮ್ಮೆ ಸಿಎಂ ಬಳಿ ನಿಯೋಗ ಹೋಗಲಾಗುವುದು. ಈ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ” ಎಂದು ತಿಳಿಸಿದರು.

ಜನಿವಾರ ತೆಗೆಸಿದ ಆರೋಪ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, “ಹಿಜಾಬ್, ಜನಿವಾರ ತೆಗೆಸೋದು ಸರಿ ಅಲ್ಲ. ಈ ಕುರಿತು ಸಿಎಂ ಕ್ರಮ ಕೈಗೊಂಡಿದ್ದಾರೆ. ಇದನ್ನು ಧರ್ಮದ ಆಧಾರದಲ್ಲಿ ಬಿಜೆಪಿಯವರು ನೋಡುತ್ತಿದ್ದಾರೆ” ಎಂದರು.

ಕೃಷ್ಣದೇವರಾಯ ಮಂಟಪದಲ್ಲಿ ಮೇಕೆ ಮಾಂಸ ಶುದ್ಧೀಕರಣ ಘಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಇಂಥ ಘಟನೆಗಳು ನಡೆಯಬಾರದು, ಜಿಲ್ಲೆಯ ಸ್ಮಾರಕಗಳಲ್ಲಿ ರಕ್ಷಣೆಗೆ ಕ್ರಮ ವಹಿಸಲಾಗುವುದು” ಎಂದು ಹೇಳಿದರು.

Leave a Reply

Your email address will not be published. Required fields are marked *