ಕೊಪ್ಪಳ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷದ ಬಳಿಕ 18ನೇ ಸೀಸನ್ನಲ್ಲಿ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆ ಮಾರನೇ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವನ್ನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದು, ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ನಡುವೆಯೇ ಕೆಲ ಅಭಿಮಾನಿಗಳು ಆರ್ಸಿಬಿ ಕಪ್ ಮುಡಿಗೇರಿಸಿಕೊಂಡ ಖುಷಿಗೆ ಗುರುವಾರ ಇಡೀ ಊರಿಗೆ ಬಾಡೂಟ ಹಾಕಿಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ, ಜೂನ್, 7: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷದ ಬಳಿಕ 18ನೇ ಸೀಸನ್ನಲ್ಲಿ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆ ಮಾರನೇ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವನ್ನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದು, ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ನಡುವೆಯೇ ಕೆಲ ಅಭಿಮಾನಿಗಳು ಆರ್ಸಿಬಿ ಕಪ್ ಮುಡಿಗೇರಿಸಿಕೊಂಡ ಖುಷಿಗೆ ಗುರುವಾರ ಇಡೀ ಊರಿಗೆ ಬಾಡೂಟ ಹಾಕಿಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿ ಮೌನವಾಗಿಸಿಬಿಟ್ಟಿತು. ಆದರೆ, ಇದಾದ ಮಾರನೇ ದಿನ ಅಂದರೆ ಗುರುವಾರ ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಯುವಕರು ಆರ್ಸಿಬಿ ಕಪ್ ಗೆದ್ದ ಖುಷಿಗೆ ಇಡೀ ಊರಿಗೆ ಬಾಡೂಟ ಹಾಕಿಸಿದ್ದಾರೆ. ಇದೇ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರಿಗೂ ಶ್ರದ್ಧಾಂಜಲಿ ಕೂಡ ಸಲ್ಲಿಸಿದ್ದಾರೆ.
ಬೆಂಗಳೂರು ತಂಡ ಟ್ರೋಫಿ ಗೆದ್ದ ದಿನವೇ ಬಾಡೂಟ ಹಾಕಿಸಬೇಕು ಎಂದುಕೊಂಡಿದ್ದರು. ಆದರೆ ಅಂದು ತಡರಾತ್ರಿ ಆಗಿದ್ದರಿಂದ ಆಗಲಿಲ್ಲ. ಮರುದಿನಕ್ಕೆ ಈ ಯೋಜನೆಯನ್ನು ಮುಂದೂಡಿದ್ದರು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನರು ಮೃತಪಟ್ಟಿದ್ದರಿಂದ ಇದನ್ನು ಕೈಬಿಡಲಾಗಿತ್ತು. ಮಾರನೇ ದಿನ ಗುರುವಾರ ಬಾಡೂಟ ಹಾಕುವ ಜೊತೆಗೆ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೆ, ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಿ ಬರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಆರ್ಸಿಬಿ ಫೈನಲ್ ಪ್ರವೇಶಿಸುತ್ತಿದ್ದಂತೆ ಗ್ರಾಮದ ಯುವಕರೆಲ್ಲರೂ ಈ ಬಾರಿ ಟ್ರೋಫಿ ಗೆದ್ದರೇ ಇಡೀ ಊರಿಗೆ ಬಾಡೂಟ ಹಾಕೋಣ ಎಂದು ಮಾತನಾಡಿದ್ದು, ಅದರಂತೆಯೇ ಫೈನಲ್ನಲ್ಲಿ ಗೆದ್ದಿದ್ದರಿಂದ ಎಲ್ಲರೂ ಸೇರಿ 2 ಕ್ವಿಂಟಲ್ ಚಿಕನ್ ಹಾಗೂ 2 ಕ್ವಿಂಟಲ್ ಪಲಾವ್ ಮಾಡಿ ಇಡೀ ಗ್ರಾಮದ ಜನರಿಗೆ ಬಾಡೂಟ ಹಾಕಿಸಿ ಗಮನ ಸೆಳೆದಿದ್ದಾರೆ.