ಕೊರಟಗೆರೆ: ವಿದ್ಯುತ್ ಶಾರ್ಟ್ ಸರ್ಕೂ್ಯಟ್ನಿಂದ ಬಡ ರೈತರೊಬ್ಬರ ಮನೆ ಸುಟ್ಟು, ಮನೆಯಲ್ಲಿದ್ದ ಬಟ್ಟೆ -ಬರೆ, ದಿನಸಿ, ದಿನಬಳಕೆ ವಸ್ತುಗಳು ಸೇರಿದಂತೆ 2.5 ಲಕ್ಷ ನಗದು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.
ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ ಗ್ರಾಮದ ತಿಮ್ಮಪ್ಪ ಎನ್ನುವ ರೈತನ ಮನೆಯಲ್ಲಿ ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆದಿದ್ದ ರಾಗಿ, ಜೋಳ, ಕಡಲೆಕಾಯಿ, ತೊಗರಿ ಬೇಳೆ ಸೇರಿದಂತೆ ಹಸುಗಳನ್ನು ಮಾರಿ ಮನೆಯಲ್ಲಿಟ್ಟಿದ್ದ ಎರಡೂವರೆ ಲಕ್ಷ ಹಣ ಹಾಗೂ ಒಡವೆ ವಸ್ತುಗಳೆಲ್ಲವೂ ಬುಧವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸುಟ್ಟು ಭಸ್ಮವಾಗಿವೆ.

ಮನೆ ಮಾಲೀಕ ರೈತ ತಿಮ್ಮಪ್ಪ ಮಾತನಾಡಿ, ಬೇಸಿಗೆ ಪ್ರಾರಂಭಕ್ಕೆ ಮುನ್ನವೇ ಉರಿ ಬಿಸಿಲು ಹೆಚ್ಚಾಗಿ, ಬೆಂಕಿ ಅವಘಡಗಳು ಅಲ್ಲಲ್ಲಿ ಜರುಗುತ್ತಿವೆ. ಬಡ ರೈತಾಪಿ ವರ್ಗ ಕೂಡಿಟ್ಟಿದ್ದ ದಿನಸಿ ಸೇರಿದಂತೆ ದಿನಬಳಕೆ ವಸ್ತುಗಳು, ಬಟ್ಟೆ ಬರೆ ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದು, ಬಡ ರೈತ ತಿಮ್ಮಪ್ಪನ ಹೆಂಡತಿ, ಮಕ್ಕಳು ಎಲ್ಲವನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದು, ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕಡುಬಡತನದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ನೀಡಿ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಹಸು ಮಾರಿದ 2 ಲಕ್ಷ ರೂ. ಮನೆಯಲ್ಲಿ ಇಟ್ಟಿದ್ವಿ, ಅಕ್ಕಿ ಬೇಳೆ ದಿನಸಿ ಸಾಮಾನುಗಳು, ಕಡಲೆಕಾಯಿ, ಮುಸಿಕಿನ ಜೋಳ ಸೇರಿದಂತೆ ಎಲ್ಲವೂ ಸುಟ್ಟು ಭಸ್ಮವಾಗಿದೆ. ಬುಧವಾರ ರಾತ್ರಿ 10 ಘಂಟೆ ತನಕ ಯಾವುದೇ ದುರ್ಘಟನೆ ಜರುಗಿರಲಿಲ್ಲ ನಾವು ಕುಟುಂಬ ಸಮೇತ ಎಲ್ಲರೂ ಹೊರಗಡೆ ಮಲಗಿದ್ದೆವು. ನಂತರ ಮನೆಗೆ ಬೆಂಕಿ ಹೊತ್ತಿಕೊಂಡು 5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ಸೇರಿದಂತೆ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.