ಪಿಂಚಣಿದಾರರ ಲೈಫ್ ಸರ್ಟಿಫಿಕೇಟ್ಗೆ ಕೆಪಿಟಿಸಿಎಲ್ನಿಂದ ತಂತ್ರಾಂಶ ಅನಾವರಣ: ನಿಗಮದ ಪಿಂಚಣಿದಾರರಿಗೆ ತಾಂತ್ರಿಕ ನೆರವು

ಪಿಂಚಣಿದಾರರ ಲೈಫ್ ಸರ್ಟಿಫಿಕೇಟ್ಗೆ ಕೆಪಿಟಿಸಿಎಲ್ನಿಂದ ತಂತ್ರಾಂಶ ಅನಾವರಣ: ನಿಗಮದ ಪಿಂಚಣಿದಾರರಿಗೆ ತಾಂತ್ರಿಕ ನೆರವು

ಬೆಂಗಳೂರು: ಪಿಂಚಣಿ ಪಡೆಯಲು ಅವಶ್ಯವಿರುವ ‘ಜೀವನ ಪ್ರಮಾಣ ಪತ್ರ’ ಪರಿಶೀಲನೆ ಮತ್ತು ಪ್ರಮಾಣೀಕರಿಸುವ ತಂತ್ರಾಂಶವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬಿಡುಗಡೆ ಮಾಡಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನಿಗಮದ ಹಣಕಾಸು ವಿಭಾಗದ ನಿರ್ದೇಶಕ ಕೆ. ಎನ್. ಗಂಗಾಧರ್ ಜೀವನ ಪ್ರಮಾಣ ಪತ್ರ ಪ್ರಮಾಣೀಕರಣ ತಂತ್ರಾಂಶವನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, “ಪಿಂಚಣಿದಾರರಿಗೆ ಅನುಕೂಲ ಕಲ್ಪಿಸಲು ನಿಗಮದ ಮಾಹಿತಿ ತಂತ್ರಜ್ಞಾನ ವಿಭಾಗ ಎನ್ಐಸಿಯ ಜೀವನ್ ಪ್ರಮಾಣ್ ಅಪ್ಲಿಕೇಷನ್ ಜತೆಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್ಸಿ) ಪ್ರಮಾಣೀಕರಣ ತಂತ್ರಾಂಶ ಅಭಿವೃದ್ಧಿಗೊಳಿಸಿದ್ದು ಪಿಂಚಣಿದಾರರಿಗೆ ತಾವಿದ್ದ ಸ್ಥಳದಿಂದಲೇ ಲೈಫ್ ಸರ್ಟಿಫಿಕೇಟ್ ವೆರಿಫಿಕೇಷನ್ ಮಾಡಬಹುದಾಗಿದೆ. ಪಿಂಚಣಿದಾರರಿಗೆ ಈ ತಂತ್ರಾಂಶದ ಬಗ್ಗೆ ಸಂಬಂಧಿಸಿದ ವಿಭಾಗಗಳಲ್ಲಿ ಜಾಗೃತಿ ಮೂಡಿಸಲಾಗುವುದು” ಎಂದು ತಿಳಿಸಿದರು.

ಕೆಇಬಿ ಪೆನ್ಷನರ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಮಾರಸ್ವಾಮಿ ಬಿ.ಪಿ, ಮಾತನಾಡಿ, “ರಾಜ್ಯದೆಲ್ಲೆಡೆ 40 ಸಾವಿರ ಪಿಂಚಣಿದಾರರಿದ್ದಾರೆ. ವರ್ಷಗಳಲ್ಲಿ ಎರಡು ಬಾರಿ ಖುದ್ದು ಕಚೇರಿಗೆ ತೆರಳಿ ಜೀವನ ಪ್ರಮಾಣ ಪತ್ರವನ್ನು ಖಾತರಿಪಡಿಸಬೇಕಾಗಿತ್ತು. ಹೊಸ ಪ್ರಮಾಣೀಕರಣ ಸಾಫ್ಟ್ವೇರ್ ಅಭಿವೃದ್ಧಿಯಿಂದ ಹಿರಿಯ ಪಿಂಚಣಿದಾರರು ಹಾಗೂ ಕುಟುಂಬದವರಿಗೆ ಅನುಕೂಲವಾಗಲಿದೆ. ಮನೆಯಿಂದಲೇ ಈ ಪ್ರಮಾಣ ಪತ್ರ ಪಡೆಯಬಹುದು” ಎಂದರು.

ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ? ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ಎಸ್ಕಾಂಗಳಿಂದ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರಿಗೆ ನೆರವಾಗಲು ನಿಗಮ ತನ್ನದೇ ಆದ ತಂತ್ರಾಂಶ ರೂಪಿಸಿದ್ದು, ಈ ತಂತ್ರಾಂಶ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಕಾರ್ಪೊರೇಷನ್ (ಎನ್ಐಸಿ) ಜತೆಗೆ ಮಾಹಿತಿಗಳನ್ನು ಹೊಂದಿಸಿ ನಿಗಮದ ಪಿಂಚಣಿ ವಿಭಾಗದ ಮೂಲ ತಂತ್ರಾಂಶ ಪಿಪಿಎಂಎಸ್ಗೆ ಮಾಹಿತಿ ನೀಡಲಿದೆ. ಸಮಗ್ರವಾಗಿ ಮೂಲ ಅಂಶಗಳನ್ನು ತಾಳೆ ಹಾಕಿದ ಬಳಿಕ ಕ.ವಿ.ಪ್ರ.ನಿ.ನಿ. ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್ಗೆ ಸಲ್ಲಿಸಲಾಗುವುದು.

ಜೀವನ್ ಪ್ರಮಾಣ ಪೋರ್ಟಲ್ ಮೂಲಕ ನೋಂದಾಯಿಸಲಾದ ಪಿಂಚಣಿದಾರರ ವಿವರಗಳನ್ನು ಪರಿಶೀಲಿಸಲು ಮತ್ತು ಪ್ರಮಾಣೀಕರಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪರಿಶೀಲನೆಯು ಪಿಂಚಣಿದಾರರ ಪರಿಶೀಲನೆಯ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಇದು ಸುರಕ್ಷಿತ, ತ್ವರಿತ ಮತ್ತು ಪರಿಣಾಮಕಾರಿಯಾಗಿದ್ದು, ಪಿಂಚಣಿದಾರರ ದಾಖಲೆಗಳ ಆನ್ಲೈನ್ ಪರಿಶೀಲನೆಯಾಗಿರುತ್ತದೆ. ಈ ಸರಳ ಆನ್ಲೈನ್ ಪ್ರಕ್ರಿಯೆಯಲ್ಲಿ ಭೌತಿಕ ಉಪಸ್ಥಿತಿ ಅವಶ್ಯಕತೆ ಇರುವುದಿಲ್ಲ.

Leave a Reply

Your email address will not be published. Required fields are marked *