ಬೆಂಗಳೂರು: ಹಲವು ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿವೆ ಎಂದು ವರದಿ ಯನ್ನು ಆರೋಗ್ಯ ಇಲಾಖೆ ನಿರಾಕರಿಸಿದೆ.
ರಾಜ್ಯದಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳಿಗೆ ಅನುದಾನದ ಕೊರತೆಯಿದೆ ಎಂಬ ವರದಿಗಳು ಆಧಾರ ರಹಿತವಾಗಿದೆ. ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳಿಗೆ ಅಗತ್ಯವಿರುವ 63.49 ಕೋಟಿ ರೂ. ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು, ಯಾವುದೇ ರೀತಿಯ ಅನುದಾನದ ಕೊರತೆಯಾಗಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
ರಾಜ್ಯದಲ್ಲಿ ಒಟ್ಟು 3 ಸಂಸ್ಥೆಗಳು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳನ್ನು ಒದಗಿಸುತ್ತಿವೆ. ಅದರಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯು ಬಿಲ್ ಪಾವತಿಗಾಗಿ ನೀಡಿದ ದಾಖಲಾತಿಗಳಲ್ಲಿ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ವಿವರಣೆ ಕೇಳಲಾಗಿದೆ. ಜೂನ್ & ಜುಲೈ 2 ತಿಂಗಳುಗಳ ಬಿಲ್ ಪಾವತಿಯಲ್ಲಿ ಮಾತ್ರವೇ ವಿಳಂಬವಾಗಿದೆ.
ಉಳಿದ ಸಂಸ್ಥೆಗಳ ಬಿಲ್ ಪಾವತಿಯಲ್ಲಿ ಯಾವುದೇ ಬಾಕಿ ಇರುವುದಿಲ್ಲ. ಇಲಾಖೆ ಕೇಳಿರುವ ಪೂರಕ ಮಾಹಿತಿಯನ್ನ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆ ಒದಗಿಸಿದ ತಕ್ಷಣ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಸ್ಥೆಯಿಂದ ಆಗಿರುವ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳ ವ್ಯತ್ಯಯವನ್ನು ಸರಿಪಡಿಸಲು ಬದಲಿ ಕ್ರಮವನ್ನೂ ಈಗಾಗಲೇ ಕೈಗೊಳ್ಳಲಾಗಿದೆ. ಈ ಕೂಡಲೇ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳನ್ನು ಪುನರಾರಂಭಿಸಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವ್ಯತ್ಯಯ ಕಂಡುಬಂದಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ