ಜಮೀನು ಪಾಲು ವಿವಾದ: ಅಣ್ಣ ಅತ್ತಿಗೆಯನ್ನೇ ಕೊಂದ ತಮ್ಮ..!!

ಮೈಸೂರು: ಗೋಮಾಳದ ಜಾಗದಲ್ಲಿ ತನಗೂ ಪಾಲು ಬೇಕು ಎಂದು ಜಗಳ ತೆಗೆದು, ಸಹೋದರನೊಬ್ಬ ಜಮೀನಿನಲ್ಲೇ ಅಣ್ಣ, ಅತ್ತಿಗೆಯನ್ನು ಗುದ್ದಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಟಿ ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೊಲೆ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣ

ಟಿ. ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದ ಸಮೀಪದ ಜೀನುಗುಡ್ಡ ಬಳಿ ಸುಮಾರು 170 ಎಕರೆ ಗೋಮಾಳವಿದೆ. ಅದರಲ್ಲಿ 15 ಗುಂಟೆಯಷ್ಟು ಜಾಗದಲ್ಲಿ ಶಿವಲಿಂಗು (62) ಹಾಗೂ ಭಾರತಿ (55) ದಂಪತಿ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಜಾಗದಲ್ಲಿ ತನಗೂ ಪಾಲು ಕೊಡುವಂತೆ ಶಿವಲಿಂಗು ಸಹೋದರ ಹನುಮಂತು (60) ಆಗಾಗ ಅಣ್ಣನ ಜೊತೆ ಜಗಳವಾಡುತ್ತಿದ್ದ ಎನ್ನಲಾಗುತ್ತಿದೆ.

ಜಮೀನಿನಲ್ಲಿ ಪಾಲು ಕೊಡುವ ಸಂಬಂಧ ಆನೇಕ ಬಾರಿ ಗ್ರಾಮದಲ್ಲಿ ಶಿವಲಿಂಗು ಮತ್ತು ಹನುಮಂತು ನಡುವೆ ಆನೇಕ ಬಾರಿ ರಾಜಿ ಸಂಧಾನ ನಡೆದಿತ್ತು. ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಆಗಾಗ ಇದೇ ವಿಷಯಕ್ಕೆ ಸಹೋದರರ ಮಧ್ಯೆ ಹಲವು ಸಲ ಜಗಳ ನಡೆದಿತ್ತು. ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ದಂಪತಿ ತಮ್ಮ ಪಾಡಿಗೆ ತಾವು ಇದ್ದರು.

ಆದರೆ, ಮಂಗಳವಾರ ಮಧ್ಯಾಹ್ನ ಭಾರತಿ ಮತ್ತು ಶಿವಲಿಂಗು ದಂಪತಿ ಎಂದಿನಂತೆ ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದರು. ಆಗ ಅಲ್ಲಿಗೆ ಬಂದ ಹನುಮಂತು ಜಗಳ ತೆಗೆದು, ತನಗೂ ಈ ಜಮೀನಿನಲ್ಲಿ ಪಾಲು ಕೊಡಲು ಕೇಳಿದ್ದಾನೆ. ಇಲ್ಲದಿದ್ದರೆ ಸಂಪೂರ್ಣ ಜಮೀನನ್ನು ಬಿಟ್ಟುಕೊಡಿ ಎಂದು ಕೂಗಾಡಲಾರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ, ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಶಿವಲಿಂಗು ಹೇಳಿದಾಗ, ಕುಪಿತಗೊಂಡ ಹನುಮಂತು ಅಲ್ಲೇ ಬಿದ್ದಿದ್ದ ಗುದ್ದಲಿಯಿಂದ ಅಣ್ಣನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಜೊತೆಗೆ ತಡೆಯಲು ಬಂದ ಅತ್ತಿಗೆ ತಲೆಗೂ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *