ದಾಂಡೇಲಿ : ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು 2 ವರ್ಷದಿಂದ ಹೊಲದ ಮಧ್ಯೆ, ವಾಸಕ್ಕೆ ಯೋಗ್ಯವಲ್ಲದ ಒಂದು ಚಿಕ್ಕ ಕಟ್ಟಡದಲ್ಲಿ ಕಾಲಿಗೆ ಸರಪಳಿ ಬಿಗಿದು ಕೂಡಿಹಾಕಿದ್ದ ಅಮಾನವೀಯ ಘಟನೆ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಜನಶಕ್ತಿ ವೇದಿಕೆ ಸಂಘಟನೆಯ ಪ್ರಮುಖರು ಮತ್ತು ಅಧಿಕಾರಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಆಲೂರಿನ ವಿನಾಯಕ ವಸಂತ ಸೋನಶೇಟ್ ಎಂಬವರನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ. ವಿನಾಯಕ ಸುಮಾರು ಒಂದು ದಶಕದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರು ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚುವಂತಹ ಕೃತ್ಯಗಳನ್ನು ಎಸಗಿದ್ದರಿಂದ, ಕುಟುಂಬದ ಸದಸ್ಯರು ಅವರನ್ನು ಸರಪಳಿಯಿಂದ ಕಟ್ಟಿಹಾಕಲು ನಿರ್ಧರಿಸಿದ್ದರು ಎನ್ನಲಾಗಿದೆ.
ಪೋಸ್ಟ್ಮ್ಯಾನ್ ಹುದ್ದೆಯಲ್ಲಿದ್ದ ವ್ಯಕ್ತಿ: ಇದು ಕುಟುಂಬದ ಅಸಹಾಯಕತೆಯ ದ್ಯೋತಕವಾಗಿ ಕಂಡರೂ, ಒಬ್ಬ ವ್ಯಕ್ತಿಯನ್ನು ಈ ರೀತಿ ಕೂಡಿಹಾಕುವುದು ಕಾನೂನು ಮತ್ತು ಮಾನವೀಯತೆಯ ದೃಷ್ಟಿಯಿಂದ ಅಕ್ಷಮ್ಯ ಅಪರಾಧ. ವಿನಾಯಕ ಅವರ ತಂದೆ ಅಂಚೆ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿಧನರಾಗಿದ್ದರು. ತಂದೆಯ ಸಾವಿನ ನಂತರ ಐಟಿಐ ವಿದ್ಯಾಭ್ಯಾಸ ಮಾಡಿದ ವಿನಾಯಕ ಅವರಿಗೆ ಅನುಕಂಪದ ಆಧಾರದ ಮೇಲೆ ಪೋಸ್ಟ್‌ಮ್ಯಾನ್ ಕರ್ತವ್ಯ ದೊರಕಿತ್ತು. ಅದರಂತೆ ಕೆಲಸಕ್ಕೆ ಸೇರಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಮಾನಸಿಕ ಅಸ್ವಸ್ಥರಾದರು. ಅವರ ವರ್ತನೆಗಳಿಂದ ಕುಟುಂಬಕ್ಕೆ ಉಪಟಳವಾಗುತ್ತಿದೆ ಎಂಬ ಕಾರಣ ನೀಡಿ, ಅವರನ್ನು ಈ ರೀತಿಯ ಕಠೋರ ಬಂಧನದಲ್ಲಿ ಇರಿಸಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಹೃದಯವಿದ್ರಾವಕ ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಜಿಲ್ಲಾ ಮುಖ್ಯಸ್ಥರು ಹಾಗೂ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ನಾಯಕ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪೊಲೀಸ್ ಇಲಾಖೆ, ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತದ ಸಹಕಾರವನ್ನು ಕೋರಿದರು. ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡ ಮಂಗಳವಾರ ಸಂಜೆ (15/07/25) ಆಲೂರು ಗ್ರಾಮಕ್ಕೆ ಧಾವಿಸಿ, ಹೊಲದ ಮಧ್ಯದಲ್ಲಿದ್ದ, ವಾಸಕ್ಕೆ ಯೋಗ್ಯವಲ್ಲದ ಕಟ್ಟಡದಲ್ಲಿ ಪಶುವಿನಂತೆ ಕಟ್ಟಿಹಾಕಿದ್ದ ವಿನಾಯಕ ವಸಂತ ಸೋನಶೇಟ್ ಅವರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
