ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ನಗರದ ಬನಶಂಕರಿ ಬಳಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯ ನಿವಾಸಿಗಳಿಗೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತುರಹಳ್ಳಿ ಅರಣ್ಯ ಸಮೀಪದ ಬನಶಂಕರಿ 6ನೇ ಹಂತದ ರಸ್ತೆಯಲ್ಲಿ ಮಂಗಳವಾರ ರಾತ್ರಿ 8.15ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಈ ವೇಳೆ ಚಿರತೆಯನ್ನು ಓಡಿಸಲು ಜನರು ಪಟಾಕಿ ಸಿಡಿಸಿದ್ದಾರೆ. ಹೀಗೆ ಮಾಡುವುದರಿಂದ ಚಿರತೆ ಭಯಗೊಂಡು ಮನೆ ಅಥವಾ ಅಪಾರ್ಟ್ಮೆಂಟ್ಗೆ ತೆರಳಿ ಮನುಷ್ಯ ಅಥವಾ ಪ್ರಾಣಿಯ ಮೇಲೆ ದಾಳಿ ಮಾಡಬಹುದು ಎಂದು ಹಿರಿಯ ಅರಣ್ಯ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಹೌದು.. ಕಳೆದ ಮಂಗಳವಾರ ಬೆಂಗಳೂರಿನ ಬನಶಂಕರಿಯ ತುರಹಳ್ಳಿ ಅರಣ್ಯದ ಅಂಚಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ (ಆರ್ಡಬ್ಲ್ಯೂಎ) ವಾಟ್ಸಾಪ್ ಗುಂಪುಗಳಲ್ಲಿ ಚಿರತೆ ಕುರಿತಾಗಿನ ದೃಶ್ಯಗಳು ಹರಿದಾಡುತ್ತಿವೆ. ಶೋಭಾ ಫಾರೆಸ್ಟ್ ವ್ಯೂ ಅಪಾರ್ಟ್ಮೆಂಟ್ ಬಳಿಯ ಬಂಡೆಯ ಮೇಲೆ ಚಿರತೆ ಮಲಗಿರುವ ಫೋಟೋ ಮತ್ತು ಕಿರು ವೀಡಿಯೊ ವೈರಲ್ ಆಗಿದೆ. ಇದರಿಂದಾಗಿ ನಿವಾಸಿಗಳು ಭಯಭೀತರಾಗಿದ್ದಾರೆ. ಕೂಡಲೆ ಚಿರತೆಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಈ ವರದಿಗಳನ್ನು ಗಮನಿಸಿದ್ದು ಮಂಗಳವಾರವೇ ಈ ಚಿತ್ರಗಳನ್ನು ತೆಗೆಯಲಾಗಿದೆಯೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ, ಆದರೆ ಈ ದೃಶ್ಯವನ್ನು ತನಿಖೆ ಮಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಈವರೆಗೂ ಕಾಣಿಸಿಕೊಂಡ ಚಿರತೆ ಈ ತಿಂಗಳ ಆರಂಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಹೊಲದಿಂದ ಮನೆಗೆ ಮರಳುತ್ತಿದ್ದ 48 ವರ್ಷದ ಮಹಿಳೆಯೊಬ್ಬರನ್ನು ಚಿರತೆ ಕೊಂದು ಹಾಕಿತ್ತು. ವಿಷಯ ತಿಳಿದ ಅಧಿಕಾರಿಗಳು 15 ಬೋನ್ಗಳನ್ನು ಅಳವಡಿಸಿ ಚಿರತೆಯನ್ನು ಸೆರೆ ಹಿಡಿದರು. ಒಂದು ತಿಂಗಳ ಹಿಂದೆ ಬೆಂಗಳೂರಿನ ಹುಣಸಮಾರನಹಳ್ಳಿಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚಿರತೆ ಸೆರೆ ಹಿಡಿಯುವಂತೆ ಇಲ್ಲಿನ ನಿವಾಸಿಗಳು ಯಲಹಂಕ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದರು. ಯಲಹಂಕ ವಾಯುನೆಲೆಯಲ್ಲಿ ಕಟ್ಟಡ ಕಾರ್ಮಿಕರು ಚಿರತೆಯ ವಿಡಿಯೋವನ್ನು ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸೆಪ್ಟೆಂಬರ್ನಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಚರಿಸಿ ನಿವಾಸಿಗಳು ಮತ್ತು ಐಟಿ ಉದ್ಯೋಗಿಗಳಲ್ಲಿ ಭಯ ಹುಟ್ಟಿಸುತ್ತಿದ್ದ ಚಿರತೆಯೊಂದು ಸೆರೆ ಸಿಕ್ಕಿತ್ತು. ಇಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾ ಬಳಿ ಮೊದಲು ಪತ್ತೆಯಾದ ಚಿರತೆಯನ್ನು ಸಿಸಿಟಿವಿ ದೃಶ್ಯಗಳ ಮೂಲಕ ಮೇಲ್ವಿಚಾರಣೆ ಮಾಡಿ ಹಿಡಿಯಲಾಯಿತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಬಳಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಈ ಪ್ರತ್ಯೇಕ ಪ್ರದೇಶ ಚಿರತೆಗಳಿಗೆ ಆಹಾರ ನೀಡುವ ಪ್ರದೇಶವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ಪ್ರಾಣಿಯನ್ನು ಬಲೆಗೆ ಬೀಳಿಸಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.