ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಲಿ: ಶಿವಕುಮಾರ್ ತಿರುಗೇಟು

ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಲಿ: ಶಿವಕುಮಾರ್ ತಿರುಗೇಟು

ಬೆಂಗಳೂರು: “ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಎಲ್ಪಿಜಿ ಹಾಗೂ ತೈಲ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದು, ಇವರಿಗೆ ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಕಪಾಳಮೋಕ್ಷ ಮಾಡಿದೆ. ಬಿಜೆಪಿ ನಾಯಕರು ತಮ್ಮ ಆಕ್ರೋಶವನ್ನು ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿಸಲಿ ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರು ಏತಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ?: ಮತ್ತೊಂದೆಡೆ, ಏ.3ರಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಟೋಲ್ ದರ ಏಕೆ ಹೆಚ್ಚಳವಾಗಿದೆ. ಇದರ ಬಗ್ಗೆ ಬಿಜೆಪಿಯವರು ಏತಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದರು.

“ನಾವು ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರ ಬದುಕನ್ನೂ ಸಹ ನಾವು ನೋಡಬೇಕಲ್ಲವೇ?, ರೈತರ ಪಕ್ಷ ಎಂದು ಕೇವಲ ಹಸಿರು ಟವೆಲ್ ಹಾಕಿಕೊಂಡರೆ ಸಾಕೇ?. ಊರುಗಳಿಗೆ ನಾವುಗಳು ಹೋದಾಗ ರೈತರು ನಮ್ಮನ್ನು ಹೊಡೆಯಲು ಬಂದಿಲ್ಲ, ಅದೇ ನಮ್ಮ ಪುಣ್ಯ. ಅನೇಕ ರೈತರು ಹಸುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾರೆ. ಈ ಹಿಂದೆ ಬೆಲೆ ಹೆಚ್ಚಳವಾದಾಗ ಅವರುಗಳೂ ಜನಪ್ರತಿನಿಧಿಗಳಾಗಿದ್ದರು ಅಲ್ಲವೇ?”ಎಂದು ಕುಟುಕಿದರು.

ಪ್ರತಿಭಟನೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಒಡಕು ಮೂಡಿರುವ ಬಗ್ಗೆ ಕೇಳಿದಾಗ, ಅವರ ಪಕ್ಷದ ವಿಚಾರ ನನಗೆ ಬೇಡ. ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಬಗ್ಗೆ ಸುಮ್ಮನೆ ಚರ್ಚೆ ಏಕೆ? ಬಿಜೆಪಿಯವರ ಪ್ರತಿಭಟನೆಗೆ ನಾನು ಶುಭಕೋರುತ್ತೇನೆ. ಅವರು ಪಕ್ಷ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ ಮಾಡಲಿ ಎಂದರು.

ಗ್ಯಾರಂಟಿ ವೆಚ್ಚ ಹೊರೆಯಾಗುತ್ತಿರುವ ಕಾರಣಕ್ಕೆ ಬೆಲೆ ಹೆಚ್ಚಳ ಮಾಡುತ್ತಿದ್ದಾರೆ ಎನ್ನುವ ಪ್ರತಿಪಕ್ಷಗಳ ಟೀಕೆಯ ಬಗ್ಗೆ ಮಾತನಾಡಿ, ಅವರುಗಳು ಮಾತನಾಡಬೇಕಲ್ಲ ಎಂದು ಮಾತನಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *