ಮೈಸೂರು: ಇಸ್ರೇಲ್-ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕು ಎಂದು ನಾಡದೇವತೆ ಚಾಮುಂಡೇಶ್ವರಿಯಲ್ಲಿ ಬೇಡುತ್ತೇನೆ” ಎಂದು ದಸರಾ ಉದ್ಘಾಟಕರಾದ ನಾಡೋಜ ಹಂಪ ನಾಗರಾಜಯ್ಯ ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನಾಡಹಬ್ಬ ದಸರಾಗೆ ಚಾಲನೆ ನೀಡಿದ ಬಳಿಕ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ”ಲೋಕಮಾತೆ ಚಾಮುಂಡೇಶ್ವರಿದೇವಿಗೆ ಮೊದಲು ನಮಸ್ಕರಿಸಿ, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ನೆನೆದು ನನ್ನ ಮಾತುಗಳನ್ನು ಆರಂಭಿಸುತ್ತೇನೆ. ಅಭೀಷ್ಟವರಪ್ರದಾಯಿನಿ ಎಂದು ಭಕ್ತರು ಆರಾಧಿಸುವ ದೇವಿ ಚಾಮುಂಡಾOಬಿಕೆಗೆ ಪೊಡಮಟ್ಟು ಮೂರು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ” ಎಂದರು.
”ಹೆಣ್ಣು ಭ್ರೂಣ ಹತ್ಯೆ ತಡೆಯಲೂ ಚಾಮುಂಡಾದೇವಿಯು ತಾಯಿ-ತಂದೆಯರಿಗೆ ಸದ್ಭುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೇ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ. ಸ್ವಾತಂತ್ರ‍್ಯ ಬಂದು ಇಷ್ಟು ವರ್ಷವಾದರೂ ಶಾಸನ ಸಭೆ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ ಖಂಡನೀಯ” ಎಂದು ಹೇಳಿದರು.
”ಬಹುದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ, ಯುವಜನರು ಇದರಿಂದ ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ವಿನಂತಿಸುತ್ತೇನೆ” ಎಂದರು.
ಸರ್ಕಾರ ಉರುಳಿಸುವ ದುರಾಲೋಚನೆ ಬಾರದಿರಲಿ: ”ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ. ಕೆಡವುವುದು ಸುಲಭ, ಕಟ್ಟುವುದು ಕಷ್ಟ, ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿ, ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು 5 ವರ್ಷದಲ್ಲಿ ಸಜ್ಜಾಗಬಹುದು” ಎಂದು ತಿಳಿಸಿದರು.
”ದಿನನಿತ್ಯ ಪತ್ರಿಕೆಗಳಲ್ಲಿ ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಓದಿ, ಯುವಕರು ಇದನ್ನೇ ಮಾದರಿಯಾಗಿ ಮುಂದುವರೆಸಿದರೆ ಏನುಗತಿ ಎಂದು ಜನರು ಬೇಸರಗೊಂಡಿದ್ದಾರೆ. ತಾಯಿ ಚಾಮುಂಡೇಶ್ವರಿ ದೇವಿ, ಇನ್ನು ಮುಂದೆ ಈ ಪದ್ಧತಿ ನಿಂತು ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಹಮ್ಮಿಕೊಂಡಿರುವ ಯೋಜನೆ ಯೋಚನೆಗಳನ್ನು ನಿರೂಪಿಸುವಂತೆ ಸ್ಪೂರ್ತಿ ಕೊಡಬೇಕೆಂದು ಪ್ರಾರ್ಥಿಸುತ್ತೇನೆ”.
”ಕರ್ನಾಟಕದ ಜನರ ಪ್ರತಿನಿಧಿಯಾಗಿ ಈ ನಾಡಹಬ್ಬವನ್ನು ಸಂತೋಷದಿAದ ಉದ್ಘಾಟಿಸಿದ್ದೇನೆ. ನನ್ನ 88 ವರ್ಷದ ದೀರ್ಘ ಜೀವನದಲ್ಲಿ ಮರೆಯಲಾಗದ ಮಧುರ ಸ್ಮೃತಿಯ ಕ್ಷಣಗಳನ್ನು ಕಲ್ಪಿಸಿಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಸರ್ಕಾರಕ್ಕೆ ಅಂತಃಕರಣ ತುಂಬಿದ ಕೃತಜ್ಞತೆಗಳು. ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ, ಆರು ವರ್ಷ ಸಹಪಾಠಿಯಾಗಿ, 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊಫೆಸರ್ ಕಮಲಾ ಹಂಪನಾರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ” ಎಂದು ಹಂಪಾ ನಾಗರಾಜಯ್ಯ ಹೇಳಿದರು.