ಹೆಪಟೈಟಿಸ್ ಎಂಬ ಮೌನ ಕಾಯಿಲೆಯ ಬಗ್ಗೆ ಇರಲಿ ಜಾಗೃತಿ.

ಹೆಪಟೈಟಿಸ್ ಎಂಬ ಮೌನ ಕಾಯಿಲೆಯ ಬಗ್ಗೆ ಇರಲಿ ಜಾಗೃತಿ.

ಹೆಪಟೈಟಿಸ್ ಎಂಬುದು ಗಂಭೀರ ವೈರಸ್ ಸೋಂಕಾಗಿದ್ದು, ಇದು ಮುಖ್ಯವಾಗಿ ಯಕೃತ್ತು ಅಂದರೆ ಲಿವರನ್ನು ಹಾನಿಗೊಳಿಸುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಹೋದರೆ ಇದು ಲಿವರ್ ಫೈಲ್ಯೂರ್ ಮತ್ತು ಗಂಭೀರ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಹಾಗಾಗಿ ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹೆಪಟೈಟಿಸ್ ದಿನವನ್ನು ಏಕೆ ಆಚರಿಸಲಾಗುತ್ತದೆ?

ವಿಶ್ವ ಹೆಪಟೈಟಿಸ್ ದಿನವನ್ನು ಜುಲೈ 28 ರಂದು ಆಚರಿಸಲಾಗುತ್ತದೆ. ವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಡಾ. ಬರೂಚ್ ಬ್ಲಂಬರ್ಗ್ ಅವರ ಜನ್ಮದಿನದ ಸವಿ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಬ್ಲಂಬರ್ಗ್ ಅವರು ಹೆಪಟೈಟಿಸ್ ಬಿ ವೈರಸ್ (HBV) ಅನ್ನು ಕಂಡುಹಿಡಿದ ಮತ್ತು ಹೆಪಟೈಟಿಸ್-ಬಿ ವೈರಸ್ಗೆ ಚಿಕಿತ್ಸೆ ನೀಡಲು ರೋಗನಿರ್ಣಯ ಪರೀಕ್ಷೆ ಮತ್ತು ಲಸಿಕೆಯನ್ನು ಅಭಿವೃದ್ಧಿಪಡಿಸಿದವರು. ಇವರ ಆವಿಷ್ಕಾರವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಿತು.

ಇವರ ಈ ಸಾಧನೆ ಮತ್ತು ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಈ ದಿನದ ಆಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ವರ್ಲ್ಡ್ ವೈಡ್ ಹೆಪಟೈಟಿಸ್ ಫ್ರೀ ಮಿಷನ್ನೊಂದಿಗೆ ಪ್ರಾರಂಭಿಸಿತು. 2008 ರಲ್ಲಿ ಮೊದಲ ಬಾರಿಗೆ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಯಿತು. ನಂತರ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಹೆಪಟೈಟಿಸ್ ದಿನದ ಮಹತ್ವ:

ಹೆಪಟೈಟಿಸ್ ಒಂದು ಮೌನ ಕಾಯಿಲೆಯಾಗಿದ್ದು, ಇದು ಯಕೃತ್ತನ್ನು ಹಾನಿಗೊಳಿಸುತ್ತದೆ, ಇದರ ಲಕ್ಷಣಗಳು ಹೆಚ್ಚಾಗಿ ತಡವಾಗಿ ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ಜನರು ತಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸಲು ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡಿಕೊಳ್ಳಲು  ಜಾಗೃತಿ ಮೂಡಿಸಲು,  ಹೆಪಟೈಟಿಸ್ ಒಂದು ಗಂಭೀರ ಕಾಯಿಲೆ ಎಂದು ಜನರಿಗೆ ತಿಳಿಸಲು ಮತ್ತು  ಸಕಾಲಿಕ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಅದನ್ನು ಯಾವ ರೀತಿ ತಡೆಗಟ್ಟಬಹುದು ಎಂದು ಜಾಗೃತಿ ಮೂಡಿಸುವುದು ವಿಶ್ವ ಹೆಪಟೈಟಿಸ್ ದಿನದ ಉದ್ದೇಶವಾಗಿದೆ.

ಹೆಪಟೈಟಿಸ್ ಲಕ್ಷಣಗಳು:

•          ಆಯಾಸ ಮತ್ತು ದೌರ್ಬಲ್ಯ

•          ವಾಕರಿಕೆ ಮತ್ತು ವಾಂತಿ

•          ಚರ್ಮ ಮತ್ತು ಕಣ್ಣುಗಳು ಹಳದಿಯಾಗುವುದು

•          ಹೊಟ್ಟೆ ನೋವು

•          ಗಾಢ ಹಳದಿ ಬಣ್ಣದ ಮೂತ್ರ

•          ಹಸಿವಿನ ಕೊರತೆ

•          ಕೀಲು ನೋವು

•          ಜ್ವರ

•          ತೂಕ ಇಳಿಕೆ

•          ಕಣ್ಣುಗಳು ಹಳದಿಯಾಗುವುದು

ಹೆಪಟೈಟಿಸ್ ವಿಧಗಳು:

ಹೆಪಟೈಟಿಸ್ ಕಾಯಿಲೆಯಲ್ಲಿ ಹಲವು ವಿಧಗಳಿವೆ. ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ. ಇದರಲ್ಲಿ ಹೆಪಟೈಟಿಸ್ ಎ ಮತ್ತು ಇ ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆ. ಹೆಪಟೈಟಿಸಿ  ಬಿ, ಸಿ ಮತ್ತು ಡಿ ರಕ್ತ, ಸೋಂಕಿತ ಸಿರಿಂಜ್, ಅಸುರಕ್ಷಿತ ಲೈಂಗಿಕತೆಯಿಂದ ಹರಡುವ ಸಾಧ್ಯತೆ ಇರುತ್ತದೆ. ಹೆಪಟೈಟಿಸಗ ಎ ಮತ್ತು ಇ ಅಷ್ಟು ಅಪಾಯಕಾರಿಯಲ್ಲ. ಆದರೆ ಹೆಪಟೈಟಿಸ್ ಬಿ, ಸಿ ಮತ್ತು ಡಿ ವೈರಸ್ಗಳು ಲಿವರ್ನ ಶಕ್ತಿಯನ್ನೇ ಕುಂದಿಸುತ್ತದೆ. ಕ್ರಮೇಣ ಇದು ಲಿವರ್ ಕ್ಯಾನ್ಸರ್ಗೆ ಕಾರಣವಾಗುತ್ತದೆ.

Leave a Reply

Your email address will not be published. Required fields are marked *