ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಮಾಡಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಲ್ಲಿ ಗೃಹಲಕ್ಷ್ಮಿ ಹಣವಿಲ್ಲ, ಈ ಉಪಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ದೂರಿದರು.
ಭಾನುವಾರ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಪರಿಮಿತವಾಗಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ. ಈ ಸರ್ಕಾರ ದಿವಾಳಿಯಾಗಿದೆ. ಉಪಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಹಣ ಜಮೆ ಮಾಡುವುದನ್ನು ನಿಲ್ಲಿಸುತ್ತಾರೆ ಎಂದರು.
ನಿಖಿಲ್ ಅವರನ್ನು ವಿಧಾನಸೌಧಕ್ಕೆ ಕಳಿಸಿ. ಆ ಹುಡುಗ ನಿಮ್ಮ ಪರವಾಗಿ ದನಿ ಎತ್ತುತ್ತಾನೆ. ಇದರಲ್ಲಿ ನಿಮಗೆ ಯಾವುದೇ ಸಂಶಯ ಬೇಡ. ನಾನೊಬ್ಬ ರೈತನ ಮಗ, ನೀವು ರೈತರ ಮಕ್ಕಳು. ಇಗ್ಗಲೂರು ಅಣೆಕಟ್ಟು ಕಟ್ಟಿಸಿದ್ದು ಈ ದೇವೇಗೌಡ. ಈ ಅಣೆಕಟ್ಟು ಕಟ್ಟಿಲ್ಲ ಅಂದರೆ ನೀರು ಹರಿಸೋಕೆ ಸಾಧ್ಯ ಆಗುತ್ತಿತ್ತಾ?. ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ೧೬೦೦ ಕೋಟಿಯಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗಿರುವ ಸರ್ಕಾರ ಸಣ್ಣಪುಟ್ಟ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟ ಮೇಲೆ ಯಾರು ಅಭ್ಯರ್ಥಿಯಾಗಬೇಕು ಎಂದು ಚರ್ಚೆ ನಡೆಯಿತು. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು. ಹಾಗಂತ ಎಲ್ಲರನ್ನೂ ನಂಬಿಸಿದರು. ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲೇ ಇದ್ದಕ್ಕಿದ್ದಂತೆ ತಮ್ಮ ತೀರ್ಮಾನ ಬದಲಾಯಿಸಿ ಸ್ನೇಹಿತನನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ನಿಖಿಲ್ ಕುಮಾರಸ್ವಾಮಿ ಅವರು ೨೦೨೮ಕ್ಕೆ ಸ್ಪರ್ಧೆ ಮಾಡುತ್ತೇನೆ, ನಾನು ಪಕ್ಷ ಕಟ್ಟುತ್ತೇನೆ ಎಂದರು. ನಾಮಪತ್ರ ಸಲ್ಲಿಸುವ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ, ನಡ್ಡಾ, ಅಮಿಶ್ ಶಾ ಅವರೆಲ್ಲರೂ ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಲು ತೀರ್ಮಾನ ಮಾಡಿದರು. ಈ ಯುವಕ ನಿಮ್ಮ ಮೊಮ್ಮಗ ಇದ್ದಹಾಗೆ, ವಿಧಾನಸಭೆಗೆ ಆಯ್ಕೆ ಮಾಡಿ ಆಶೀರ್ವಾದ ಮಾಡಿ. ನಮ್ಮ ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ನಿಖಿಲ್ ಕುಮಾರಸ್ವಾಮಿ ವಿಧಾನಸೌಧಕ್ಕೆ ಹೋಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.