ಮುಂದಿನ ವಾರ ಲಾರಿ ಮುಷ್ಕರ ಬಹುತೇಕ ಫಿಕ್ಸ್. ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮುಷ್ಕರಕ್ಕೆ ಕರೆ ನೀಡಲು ಮುಂದಾಗಿದ್ದು, ಅವರನ್ನು ಅದ್ಹೇಗೋ ಸಮಾಧಾನ ಮಾಡಿದ್ದ ರಾಜ್ಯ ಸರ್ಕಾರ ಮುಷ್ಕರ ನಡೆಸದಂತೆ ತಡೆದಿತ್ತು. ಆದರೆ, ಇದೀಗ ಲಾರಿ ಮಾಲೀಕರ ಸರದಿ. ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಲಾರಿ ಮಾಲೀಕರು, ಲಾರಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಸಂಬAಧ ಶನಿವಾರ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ನಾಳೆ ಈ ಕುರಿತು ಸಭೆ ನಡೆಸುತ್ತೇವೆ. ದರ ಏರಿಕೆ ಖಂಡಿಸಿ ಮುಂದಿನ ವಾರ ಮುಷ್ಕರಕ್ಕೆ ಕರೆ ನೀಡಲಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ ೨.೭೩ ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡಿಸೆಲ್ ಬೆಲೆ ೨ ರೂಪಾಯಿಯಷ್ಟು ಹೆಚ್ಚಳವಾಗಿದೆ. ಏಪ್ರಿಲ್ ೧ರಿಂದಲೇ ದರ ಹೆಚ್ಚಳ ಜಾರಿಗೆ ಬಂದಿದೆ. ದರ ಹೆಚ್ಚಳದ ನಂತರ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ೯೧.೦೨ ರೂಪಾಯಿ ಆಗಿದೆ. ಒಂದೆಡೆ ಡೀಸೆಲ್ ದರ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೆ ಮತ್ತೊಂದೆಡೆ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಈಗಾಗಲೇ ರಾಜ್ಯದಲ್ಲಿ ಬಹುತೇಕ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಡೀಸೆಲ್ ಬೆಲೆ ಹೆಚ್ಚಳದಿಂದ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಸಾಗಾಟ ದರ ಹೆಚ್ಚಳವಾದಲ್ಲಿ, ಮತ್ತೆ ಬೆಲೆ ಏರಿಕೆಯ ಹೊಡೆತ ಎದುರಿಸಬೇಕಾಗಬಹುದು. ಅದರಲ್ಲೂ ಒಂದು ವೇಳೆ ಲಾರಿ ಮುಷ್ಕರ ನಡೆದಿದ್ದೆ ಆದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮೇಲೆ ನಕಾರಾತ್ಮಕ ಪರಿಣಾಮವಾಗಲಿದೆ.