ಮಡಿಕೇರಿ: ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಏಕೆಂದರೆ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸುವ ಹಬ್ಬವಾಗಿರುವ ಈ ಹಬ್ಬ ಸುಗ್ಗಿ ಹಬ್ಬವಾಗಿ ಗಮನಸೆಳೆಯುತ್ತದೆ. ಇದರ ಆಚರಣೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಇರುವುದನ್ನು ನಾವು ಕಾಣಬಹುದು.
ಹುತ್ತರಿ ಹಬ್ಬ ಕೇವಲ ಸುಗ್ಗಿ ಹಬ್ಬ ಮಾತ್ರವಲ್ಲ, ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ, ಜಾನಪದದ ಹಿನ್ನಲೆ ಇದಕ್ಕಿದೆ. ಈ ಹಬ್ಬದಲ್ಲಿ ಗದ್ದೆಯಿಂದ ತೆನೆಯೊಡೆದ ಧಾನ್ಯ(ಭತ್ತ)ವನ್ನು ತಂದು ಅದನ್ನು ಪೂಜಿಸಿ, ಹೊಸ ಅಕ್ಕಿಯ ಪಾಯಸ ಮಾಡಿ ಮನೆಮಂದಿಯೆಲ್ಲಾ ಸೇವಿಸುವುದು ಪ್ರಮುಖ ಆಚರಣೆಯಾಗಿದೆ. ಕೊಡಗಿನ ಮಳೆ ದೇವ ಎಂದೇ ಕರೆಯುವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಾನದಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ 13 ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸಮಾವೇಶಗೊಂಡು, ಹುತ್ತರಿ ಮುಹೂರ್ತವನ್ನು ನಿಶ್ಚಯಿಸುವುದು ನಡೆದು ಬಂದ ರೂಢಿಯಾಗಿದೆ.