ಮಡಿಕೇರಿ || ಕೊಡಗಿನಲ್ಲಿ ವನ್ಯಪ್ರಾಣಿ- ಮಾನವ ಸಂಘರ್ಷಕ್ಕೆ ಮುಕ್ತಿ ಯಾವಾಗ?

ಮಡಿಕೇರಿ || ಕೊಡಗಿನಲ್ಲಿ ವನ್ಯಪ್ರಾಣಿ- ಮಾನವ ಸಂಘರ್ಷಕ್ಕೆ ಮುಕ್ತಿ ಯಾವಾಗ?

ಮಡಿಕೇರಿ,: ಕೊಡಗಿನಲ್ಲಿ ಹುಲಿ ಮತ್ತು ಕಾಡಾನೆ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದು, ಯಾವಾಗ? ಯಾವ ಪ್ರಾಣಿ? ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯದಲ್ಲಿ ದಿನ ಕಳೆಯುವಂತಾಗಿದೆ. ಮೇಲಿಂದ ಮೇಲೆ ದಾಳಿಗಳು ನಡೆಯುತ್ತಿರುವುದರಿಂದ ಕಾಫಿ ತೋಟದಲ್ಲಿ ನಡೆದಾಡಲು ಜನ ಹೆದರುವಂತಾಗಿದೆ. ಜೊತೆಗೆ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಇಲ್ಲಿನ ಬೆಳೆಗಾರರು ಸಕಾಲದಲ್ಲಿ ಕೆಲಸ ಮಾಡಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಕಾಫಿತೋಟದಲ್ಲಿ ಗಿಡಕಪಾತ್, ಮರಕಪಾತ್ ಮಾಡುವುದು, ಚಿಗುರು ತೆಗೆಯುವುದು, ಗೊಬ್ಬರ ಹಾಕಲು ಸಿದ್ಧತೆ ಮಾಡಿಕೊಳ್ಳುವುದು ಹೀಗೆ ವಿವಿಧ ಕೆಲಸಗಳನ್ನು ಮಾಡಿಸುವುದು ಅನಿವಾರ್ಯವಾಗಿದೆ. ಆದರೆ ಇದೇ ಸಮಯದಲ್ಲಿ ಕಾಡಾನೆ ಮತ್ತು ಹುಲಿಯ ಉಪಟಳ ಕಾಣಿಸುತ್ತಿರುವುದು ಕೂಲಿ ಕಾರ್ಮಿಕರು ತೋಟಕ್ಕೆ ಬರಲು ಅಂಜುವಂತಾಗಿದೆ. ಕೊಡಗಿನ ಕಾಫಿ ತೋಟ ಹಾಗೂ ಕಾಡುಗಳಲ್ಲಿ ಹಲಸಿನ ಹಣ್ಣು ಬಿಡುವ ಕಾಲವಾಗಿರುವುದರಿಂದ ಹಲಸಿನ ಹಣ್ಣಿನ ವಾಸನೆಯ ಜಾಡು ಹಿಡಿದು ಕಾಡಾನೆಗಳು ಕಾಡಿನಿಂದ ನೇರವಾಗಿ ತೋಟದೊಳಕ್ಕೆ ನುಗ್ಗುತ್ತಿವೆ.

ಇನ್ನೊಂದೆಡೆ ಕಾಡಿನಲ್ಲಿ ಬೇಟೆ ಸಿಗದ ಹುಲಿಗಳು ನೇರವಾಗಿ ಗ್ರಾಮಗಳಿಗೆ ನುಗ್ಗುತ್ತಿದ್ದು, ಮೇಯಲು ಕಟ್ಟಿ ಹಾಕುವ ಹಸುಗಳನ್ನು ಅಥವಾ ಕೊಟ್ಟಿಗೆಗೆ ನುಗ್ಗಿ ಹಸು ಕರುಗಳನ್ನು ತಿಂದು ಹಾಕುತ್ತಿವೆ. ಸದ್ಯ ವನ್ಯಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ಜನರು ಮುಂದೇನು ಮಾಡುವುದು ಎಂದು ಯೋಚಿಸುವಂತಾಗಿದೆ. ಸದ್ಯ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವುದು ಅಥವಾ ಸೆರೆ ಹಿಡಿಯುವುದು ಅಗತ್ಯವಾಗಿದೆ. ಇನ್ನೊಂದೆಡೆ ದಕ್ಷಿಣಕೊಡಗಿನಲ್ಲಿ ಹುಲಿಯ ಆರ್ಭಟ ಮಿತಿಮೀರಿದ್ದು, ಹುಲಿಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಸಾಕಾನೆಗಳನ್ನು ಬಳಸಿಕೊಂಡು ಮಾಡುತ್ತಾ ಬಂದಿದ್ದರೂ ಅರಣ್ಯ ಇಲಾಖೆಯ ಕಣ್ತಪ್ಪಿಸಿಕೊಂಡು ಹುಲಿ ಓಡಾಡುತ್ತಿದೆ.

ಹುಲಿ ಸೆರೆಹಿಡಿಯಲು ಜನರ ಆಗ್ರಹ ಹುಲಿಯನ್ನು ಸೆರೆಹಿಡಿಯಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದು, ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ. ದಕ್ಷಿಣಕೊಡಗಿನ ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ತೆರಾಲು ಗ್ರಾಮ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಹುಲಿ ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿದ್ದು, ಜನರು ಭಯಪಡುವಂತಾಗಿದೆ. ಹೀಗಾಗಿ ಇಲ್ಲಿ ಹುಲಿ ಸೆರೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಹುಲಿಯ ಸುಳಿವು ಮಾತ್ರ ಸಿಗದಂತಾಗಿದೆ. ತೆರಾಲು, ಟಿ.ಶೆಟ್ಟಿಗೇರಿ, ಶ್ರೀಮಂಗಲ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಹುಲಿಯು ಆಗಾಗ ಕಾಣಿಸಿಕೊಳ್ಳುತ್ತಿರುವುದರಿಂದ ಜನ ಭಯಗೊಂಡಿದ್ದು ಸೆರೆ ಹಿಡಿಯಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.

ಶಾಸಕ ಎ.ಎಸ್.ಪೊನ್ನಣ್ಣ ಅವರು ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ತಾಕೀತು ಮಾಡಿದ್ದಾರೆ. ಈಗಾಗಲೇ ಕಾರ್ಯಾಚರಣೆ ಸ್ಥಳಕ್ಕೆ ಹೋಗಿ ಮಾಹಿತಿಯನ್ನು ಪಡೆದುಕೊಂಡು ಬಂದಿದ್ದಾರೆ. ಅಲ್ಲದೆ ತೆರಾಲು ಭಾಗವು ಬ್ರಹ್ಮಗಿರಿ ವನ್ಯಜೀವಿ ವ್ಯಾಪ್ತಿಯಲ್ಲಿ ಬರಲಿದ್ದು, ಕಾಡಂಚಿನಲ್ಲಿ ವಾಸಿಸುವ ಜನರಿಗೆ ಸುರಕ್ಷತೆ ಒದಗಿಸುವುದು ಅಗತ್ಯವಾಗಿದೆ. ಬಡವರು, ಆದಿವಾಸಿಗಳು ಸಹ ವಾಸಿಸಬೇಕು. ಆ ನಿಟ್ಟಿನಲ್ಲಿ ಭೂಮಿ ಒದಗಿಸಬೇಕು. ಆದಿವಾಸಿಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭರವಸೆ ನೀಡಲಾಗಿದೆ. ಅದರಂತೆ ನಡೆದುಕೊಳ್ಳಬೇಕು. ಮಾನವೀಯತೆಯಿಂದ ನೋಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

ಹುಲಿ ಕಾರ್ಯಾಚರಣೆಗೆ ಸಾಕಾನೆಗಳ ಬಳಕೆ ಹುಲಿ ಸೆರೆ ಕಾರ್ಯಾಚರಣೆ ಕುರಿತಂತೆ ಮಾತನಾಡಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಅರಣ್ಯ ಅಧಿಕಾರಿಗಳು, ಗ್ರಾ.ಪಂ.ಪಿಡಿಒ ಹಾಗೂ ಸ್ಥಳೀಯರು ಒಳಗೊಂಡ ವಾಟ್ಸಾಪ್ ಗುಂಪು ಮಾಡಿ, ತಕ್ಷಣವೇ ಮಾಹಿತಿ ನೀಡಿದ್ದಲ್ಲಿ ಹುಲಿಯನ್ನು ಸೆರೆ ಹಿಡಿಯಲು ಸಹಕಾರಿಯಾಗುತ್ತದೆ.

ಆ ನಿಟ್ಟಿನಲ್ಲಿ ಸ್ಥಳೀಯರನ್ನು ಸಹಕರಿಸುವಂತೆ ಕೋರಿದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಇರ್ಪುವಿನಿಂದ ಕೂಟಿಯಾಲವರೆಗೂ ಹುಲಿಯ ಚಲನವಲನದ ಬಗ್ಗೆ ನಿಗಾವಹಿಸಲಾಗುವುದು. ಈ ಸಂಬಂಧ ಕ್ಯಾಂಪ್ ಗಳನ್ನು ಮಾಡಿ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದಿಂದ ಗೋಪಿ ಮತ್ತು ಶ್ರೀರಾಮ ಎರಡು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಜಿಲ್ಲೆಯಲ್ಲಿ ಹಿಂದಿನಿಂದಲೂ ವನ್ಯಜೀವಿ ಹಾಗೂ ಮಾನವ ಸಂಘರ್ಷ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಶೀಘ್ರವೇ ಹುಲಿಯನ್ನು ಸೆರೆಹಿಡಿಯುವ ಭರವಸೆಯನ್ನು ನೀಡಿದ್ದಾರೆ. ಇನ್ನು ಒಂದೆಡೆ ಹುಲಿ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮತ್ತೊಂದೆಡೆ ಕಾಡಾನೆಗಳ ಉಪಟಳ ಶುರುವಾಗಿದೆ. ಕಾಫಿ ತೋಟದ ಕಡೆಗೆ ಬರುತ್ತಿರುವ ಕಾಡಾನೆಗಳು ಜನರ ಮೇಲೆ ದಾಳಿ ಮಾಡುತ್ತಿವೆ. ಇದೀಗ ಪಾಲಿಬೆಟ್ಟ ಸಮೀಪದ ಎಮ್ಮೆ ಗುಂಡಿ ಎಸ್ಟೇಟ್ (ಟಾಟಾ ಕಾಫಿ) ನಲ್ಲಿ ತೆರಳುತ್ತಿದ್ದ ಚೆಲ್ಲ ಮೇಸ್ತ್ರಿ (55) ಎಂಬುವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಬೇಕಿದೆ ಒಟ್ಟಾರೆ ಕೊಡಗಿನಲ್ಲಿ ಕಾಡಾನೆ, ಹುಲಿ, ಚಿರತೆಗಳ ಹಾವಳಿ ಹೆಚ್ಚಾಗಿದೆ. ಇನ್ನೊಂದೆಡೆ ಮಂಗಗಳ ಹಾವಳಿಯೂ ಹೆಚ್ಚಾಗಿದ್ದು, ಹಿಂಡು ಹಿಂಡಾಗಿ ಬಂದು ಏಲಕ್ಕಿ ಗಿಡಗಳನ್ನು ಸಿಗಿದು ಹಾಕುವುದು, ಬಾಳೆಹಣ್ಣನ್ನು ನಾಶ ಮಾಡುವುದು ಹೀಗೆ ಹಲವು ರೀತಿಯಲ್ಲಿ ಉಪಟಳ ನೀಡುತ್ತಿವೆ. ಹೀಗಾಗಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಂಗಗಳು ಹಾಳು ಮಾಡಿದರೆ, ಕಾಡಾನೆ ಮತ್ತು ಹುಲಿಗಳು ಜನರನ್ನೇ ಟಾರ್ಗೆಟ್ ಮಾಡುತ್ತಿವೆ. ಹೀಗಾಗಿ ಜನರು ಭಯದಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಜನ ನೆಮ್ಮದಿಯಾಗಿ ಬದುಕಲು ಎಡೆ ಮಾಡಿಕೊಡಬೇಕಿದೆ.

Leave a Reply

Your email address will not be published. Required fields are marked *