ಬೆಂಗಳೂರು: ಒಂದೆಡೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಅನಾಮಿಕ ಹೇಳಿರುವ ಪ್ರಕರಣದ ಎಸ್ಐಟಿ ತನಿಖೆ ತೀವ್ರಗೊಂಡಿದ್ದು, ಮತ್ತೊಂದೆಡೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗುರುವಾರ ಉಡುಪಿಯ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಹೇಶ್ ಶೆಟ್ಟಿಯನ್ನು ಉಜಿರೆಯ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದು ಉಡುಪಿಯತ್ತ ಕರೆದೊಯ್ದಿದ್ದಾರೆ. ಜತೆಗೆ ತಿಮರೋಡಿ ಅವರ ವಕೀಲರು ಹಾಗೂ ಬೆಂಬಲಿಗರು ಕೂಡ ಉಡುಪಿಯತ್ತ ತೆರಳಿದ್ದಾರೆ. ನಂತರ ಉಡುಪಿಯಲ್ಲಿ ತಿಮರೋಡಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದಿರುವುದನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಖಚಿತಪಡಿಸಿದ್ದರು. ತಿಮರೋಡಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಸರಿಯಾದ ಉತ್ತರ ನೀಡದೇ ಇರುವುದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹರಿರಾಮ್ ಶಂಕರ್ ತಿಳಿಸಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ ಮನೆ ಮುಂದೆ ಹೈಡ್ರಾಮಾ
ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯುವುದಕ್ಕಾಗಿ ಬ್ರಹ್ಮಾವರ ಪೊಲೀಸರು ಗುರುವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದರು. ಇದೇ ವೇಳೆ ತಿಮರೋಡಿ ವಕೀಲರು ಹಾಗೂ ಬೆಂಬಲಿಗರು ಅವರ ಮನೆ ಮುಂದೆ ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ, ತಿಮರೋಡಿ ಬೆಂಬಲಿಗರು, ವಕೀಲರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.
ನಂತರ ಪೊಲೀಸರು ವಶಕ್ಕೆ ಪಡೆದುಕೊಂಡು ತೆರಳುವಾಗ ರೋಷಾವೇಶದಿಂದ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ‘ನನ್ನ ಜೀವಕ್ಕೆ ಏನಾದರೂ ಆದರೆ ಸರ್ಕಾರವೇ ಕಾರಣ. ಏನಾದರೂ ಆದರೆ ಬಿಜೆಪಿ ಅವರೇ ಕಾರಣ’ ಎಂದರು.
ಏನಿದು ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣ?
ಧರ್ಮಸ್ಥಳ ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಹಲವಾರು ಮಂದಿಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಅವರ ಮೇಲಿದೆ. ಅದೇ ರೀತಿ, ಬಿಎಲ್ ಸಂತೋಷ್ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಉಡುಪಿಯ ಬಿಜೆಪಿ ಮುಖಂಡರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು.
ತಿಮರೋಡಿಗೆ 2 ಬಾರಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಕೊನೆಯದಾದಗಿ ಬುಧವಾರ ನೋಟಿಸ್ ನೀಡಲಾಗಿತ್ತು. ಗುರುವಾರ ಬೆಳಗ್ಗೆ 9 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆ ನೋಟಿಸ್ಗೆ, ‘15 ದಿನಗೊಳಗೆ ಹಾಜರಾಗುತ್ತೇನೆ’ ಎಂದು ತಿಮರೋಡಿ ಉತ್ತರಿಸಿದ್ದರು. ಪೊಲೀಸರು ಕೊಟ್ಟ ನೋಟಿಸ್ನಲ್ಲೇ ಉತ್ತರಿಸಿ ಸಹಿ ಮಾಡಿದ್ದರು. ಈ ಬೆಳವಣಿಗೆ ನಂತರ ಪೊಲೀಸರು ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಇದೀಗ ಬಂಧಿಸಲಾಗಿದೆ.