ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ (KSRTC) ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಐವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (KR Pete) ತಾಲೂಕಿನಲ್ಲಿ ಜರುಗಿದೆ
ಕೆ.ಆರ್.ಪೇಟೆ ತಾಲೂಕಿನ ಕುಂದಹಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಬೆಳಗ್ಗೆ ಆಲೇನಹಳ್ಳಿ ಗ್ರಾಮದಿಂದ ಕೆ.ಆರ್.ಪೇಟೆಗೆ ಕೆಎಸ್ಆರ್ಟಿಸಿ ಬಸ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಇದ್ದ ಬೃಹತ್ ಮರಕ್ಕೆ ಬಸ್ ಡಿಕ್ಕಿಯಾಗಿದೆ. ಪರಿಣಾಮ 20 ಜನರಿಗೆ ಗಂಭೀರ ಗಾಯವಾಗಿದ್ದು, ಈ ಪೈಕಿ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳೇ ಇದ್ದಾರೆ. ಹಲವು ಮಕ್ಕಳ ಕೈ ಕಾಲು ಮುರಿದು ಗಂಭೀರ ಗಾಯಗೊಂಡಿದ್ದಾರೆ.
ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಲವರನ್ನು ಮೈಸೂರಿಗೆ ರವಾನೆ ಮಾಡಲಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.