ಮಂಡ್ಯ || ಹೇಮಾವತಿ ಎಡದಂಡೆ ನಾಲೆಗಳಿಗಿಲ್ಲ ನೀರು – ಕೆ.ಆರ್ ಪೇಟೆ, ನಾಗಮಂಗಲ ರೈತರು ಕಂಗಾಲು

ಮಂಡ್ಯ || ಹೇಮಾವತಿ ಎಡದಂಡೆ ನಾಲೆಗಳಿಗಿಲ್ಲ ನೀರು – ಕೆ.ಆರ್ ಪೇಟೆ, ನಾಗಮಂಗಲ ರೈತರು ಕಂಗಾಲು

ಮಂಡ್ಯ: ಕೆಆರ್‌ಎಸ್ ಹಾಗೂ ಹೇಮಾವತಿ ಜಲಾಶಯಗಳಿಂದ  ಹೇಮಾವತಿ ಎಡದಂಡೆ ನಾಲೆಗಳಿಗೆ ನೀರು ಹರಿಸದಿರುವುರಿಂದ ಕೆ.ಆರ್ ಪೇಟೆ ಮತ್ತು ನಾಗಮಂಗಲ ರೈತರು ಕಂಗಾಲಾಗಿದ್ದಾರೆ.

ಕೆಆರ್‌ಎಸ್ ಹಾಗೂ ಹೇಮಾವತಿ ಜಲಾಶಯಗಳು ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ್ದು, ಲಕ್ಷಾಂತರ ರೈತರು ಇದೇ ಜಲಾಶಯವನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ನಾಲೆಯಲ್ಲಿ ನೀರು ಹರಿಯದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಾರಿ ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿ 20 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ರೈತರು ಬೇಸಿಗೆ ಬೆಳೆಗೆ ನೀರು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಫೆಬ್ರವರಿ ತಿಂಗಳು ಮುಗಿಯುತ್ತಾ ಬಂದರೂ ನಾಲೆಗಳಲ್ಲಿ ನೀರು ಹರಿದಿಲ್ಲ. ಅಲ್ಲದೆ ಕೆರೆ ಕಟ್ಟೆಗಳಲ್ಲಿ ನೀರು ತುಂಬದಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ನೀರಿಲ್ಲದೆ ಜಮೀನುಗಳೂ ಬರುಡಾಗಿವೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುವ ಸಂಬಂಧ ಮಂಡ್ಯ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಮಾಡಿ ವಿಶ್ವೇಶ್ವರಯ್ಯ ನಾಲೆಗಳಿಗೆ ನೀರು ಹರಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ಹೇಮಾವತಿ ಜಲಾಶಯದಿಂದ ಹೇಮಾವತಿ ನಾಲೆಗಳಿಗೆ ನೀರು ಹರಿಸುವ ಸಂಬಂಧ ಹಾಸನ ಉಸ್ತುವಾರಿ ಸಚಿವ ರಾಜಣ್ಣ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಇದುವರೆಗೂ ಸಭೆ ಮಾಡಿಲ್ಲ.

ಕಾವೇರಿ ನೀರಾವರಿ ನಿಗಮದ ಅಡಿಯಲ್ಲಿಯೇ ಎರಡು ಜಲಾಶಯಗಳು ಬಂದರೂ, ಸರ್ಕಾರ ಬೇರೆ ಬೇರೆ ತೀರ್ಮಾನ ತೆಗೆದುಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಭೆ ಮಾಡಿ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಜಿಲ್ಲಾಧಿಕಾರಿ ಸರ್ಕಾರದ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *